ಉದಯೋನ್ಮುಖ ನೃತ್ಯಾಭ್ಯಾಸಿಗಳಾದ ಶ್ರೀಲಕ್ಷ್ಮೀ ಪ್ರಣತಿ ಮತ್ತು ಆರುಷಿ ಗಿರೀಶ್ ಖ್ಯಾತ ‘ನೃತ್ಯೋಮಾ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್’ ಸಂಸ್ಥೆಯ ನಾಟ್ಯಗುರು ರಾಧಿಕಾ ಎಮ್.ಕೆ.ಸ್ವಾಮಿ ಅವರಲ್ಲಿ ಬಹು ಬದ್ಧತೆ ಮತ್ತು ಆಸಕ್ತಿಯಿಂದ ಭರತನಾಟ್ಯ ಕಲಿಯುತ್ತಿದ್ದಾರೆ. ಗುರು ರಾಧಿಕಾ, ತಮ್ಮ ಈ ಇಬ್ಬರು ಶಿಷ್ಯೆಯರಿಗೆ ಸಾಕಷ್ಟು ತರಬೇತಿ ನೀಡಿ ಇದೀಗ ಅವರನ್ನು ಏಕವ್ಯಕ್ತಿ ಪ್ರದರ್ಶನ ನೀಡಲು ಸಜ್ಜುಗೊಳಿಸಿ ತಮ್ಮ ‘ನೃತ್ಯೋಮಾ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್’ ಸಂಸ್ಥೆಯ ಮೂಲಕ ವಿದ್ಯುಕ್ತವಾಗಿ ‘’ ರಂಗಾಭಿವಂದನೆ’’ ಯನ್ನು ನೆರವೇರಿಸಿಕೊಳ್ಳಲು ಸೆಪ್ಟೆಂಬರ್ 2 ಶನಿವಾರ ಬೆಳಗ್ಗೆ 10 ಗಂಟೆಗೆ ಮಲ್ಲೇಶ್ವರದ ಸೇವಾಸದನದಲ್ಲಿ ಆಯೋಜಿಸಿದ್ದಾರೆ.
ಶ್ರೀ.ಪ್ರಸನ್ನ ಮತ್ತು ನೇತ್ರಾ ದಂಪತಿಗಳ ಮಗಳಾದ ಶ್ರೀಲಕ್ಷ್ಮೀ ಪ್ರಣತಿ, ತನ್ನ ಏಳರ ಬಾಲ್ಯದಿಂದಲೇ ನೃತ್ಯಾಸಕ್ತಳಾಗಿದ್ದು ಮೊದಲು ಗುರು ಅನುರಾಧ ವಿಕ್ರಾಂತ್ ಅವರಲ್ಲಿ ನಂತರ ರಾಧಿಕಾ ಅವರಲ್ಲಿ ಹೆಚ್ಚಿನ ಕಲಿಕೆಗೆ ಭರತನಾಟ್ಯ ಕಲಿಯಲು ಸೇರಿ ಪರಿಶ್ರಮದಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾಳೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಗುರು ರಾಜಲಕ್ಷ್ಮಿ ಅವರಲ್ಲಿ ಕಳೆದ 2 ವರ್ಷಗಳಿಂದ ಕಲಿಯುತ್ತಿದ್ದಾಳೆ. ಈಗಾಗಲೇ ಶ್ರೀಲಕ್ಷ್ಮೀ ಗಂಧರ್ವ ಪರೀಕ್ಷೆಯ 2 ನೆಯ ಹಂತವನ್ನು ಉನ್ನತಾಂಕಗಳಿಂದ ಮುಗಿಸಿದ್ದಾಳೆ. ಪ್ರಸ್ತುತ ಇವಳು, ಟ್ರಿಯೋ ವರ್ಲ್ಡ್ ಶಾಲೆಯಲ್ಲಿ 7 ನೆಯ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಚುರುಕುಮತಿ. ಓದಿನಲ್ಲಿ ಜಾಣೆಯಾದಂತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂದು. ಕ್ರೀಡೆಗಳಲ್ಲೂ ಸಾಧನೆ ಮಾಡಿರುವ ಇವಳು, ಅಂತರಶಾಲಾ ಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದು, ಶಾಲೆಯ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಗೋಲ್ಡ್ ಮತ್ತು ಬ್ರಾನ್ಜ್ ಪಡೆದು ಜಯಶಾಲಿಯಾಗಿರುವ ಅಗ್ಗಳಿಕೆ ಇವಳದು. ಭಾಷಣ ಮತ್ತು ಪ್ರಬಂಧ ರಚನೆಗಳಲ್ಲೂ ಬಹುಮಾನಗಳನ್ನು ಪಡೆದಿದ್ದಾಳೆ.
ಶ್ರೀ ಗಿರೀಶ್ ಮತ್ತು ಅಶ್ವಿನಿಯವರ ಮಗಳಾದ ಅರುಷಿ ಕೂಡ ಪ್ರತಿಭಾವಂತೆ. ಬಾಲ್ಯದ ತನ್ನ 8 ನೆಯ ವಯಸ್ಸಿನಿಂದ ಇವಳು, ಗುರು ರಾಧಿಕಾ ಸ್ವಾಮಿಯವರಲ್ಲಿ ಭರತನಾಟ್ಯ ಕಲಿಯುತ್ತಿದ್ದಾಳೆ. ಗುರು ಮೀರಾ ತುಷಾರ್ ಅವರಲ್ಲಿ ಸಂಗೀತ ಕಲಿಯುತ್ತಿದ್ದಾಳೆ. ಸಹಕಾರ ನಗರದ ಟ್ರಿಯೋ ವರ್ಲ್ಡ್ ಶಾಲೆಯಲ್ಲಿ 7 ನೆಯ ತರಗತಿಯಲ್ಲಿ ಓದುತ್ತಿರುವ ಇವಳು, ಪಟ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದಾಳೆ. ಈಗಾಗಲೇ ನೃತ್ಯೋಮಾ ಶಾಲೆಯ ಎಲ್ಲ ಕಾರ್ಯಕ್ರಮಗಳಲ್ಲಿ ನರ್ತಿಸಿದ್ದು, ಅಬಾಕಸ್ ಗ್ರ್ಯಾಂಡ್ ಮಾಡ್ಯೂಲ್ ಪರೀಕ್ಷೆಯಲ್ಲೂ ಜಯಶಾಲಿಯಾಗಿದ್ದಾಳೆ. ಇಸ್ಕಾನಿನ ಗೀತಶ್ಲೋಕ ಸ್ಪರ್ಧೆ, ಶಾಲೆಯ ನೃತ್ಯ ಹಾಗೂ ಸಂಗೀತ ಸ್ಪರ್ಧೆಗಳಲ್ಲಿ ಮತ್ತು ಚಿತ್ರ ರಚನಾ ಸ್ಪರ್ಧೆಯಲ್ಲಿ ಬಹುಮಾನ ಗಳಿಕೆ, ಅಬಾಕಸ್ ಚಟುವಟಿಕೆಗಳಲ್ಲೂ ಮುಂದಿದ್ದಾಳೆ. ಓದಿನಲ್ಲೂ ಮುಂದಿರುವ ಆರುಷಿ, ಗಂಧರ್ವ ಪರೀಕ್ಷೆಯ 1 ನೆಯ ಹಂತವನ್ನು ಉನ್ನತಾಂಕಗಳಿಂದ ಮುಗಿಸಿದ್ದಾಳೆ.
-ವೈ.ಕೆ.ಸಂಧ್ಯಾ ಶರ್ಮ