Thursday, November 30, 2023
Homeಇದೀಗ ಬಂದ ತಾಜಾ ಸುದ್ದಿಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪ್ರೇರಣದಾಯಕ ಭಾಷಣಗಳ ಸಂಗ್ರಹ 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ...

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪ್ರೇರಣದಾಯಕ ಭಾಷಣಗಳ ಸಂಗ್ರಹ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಸಂಪುಟ-2 ಮತ್ತು 3 ಬಿಡುಗಡೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣಗಳು ಮತ್ತು ಮಾತುಕತೆಗಳಿಂದ ಸಂಗ್ರಹಿಸಿದ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಎರಡು ಸಂಪುಟಗಳನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಇಂದು ಭೋಪಾಲ್ನ ಕುಶಾಭಾವ್ ಠಾಕ್ರೆ ಅಂತಾರಾಷ್ಟ್ರೀಯ ಸಮ್ಮೇಳನ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು. ಜೂನ್ 2020 ರಿಂದ ಮೇ 2021 ಮತ್ತು ಜೂನ್ 2021 ರಿಂದ ಮೇ 2022 ರವರೆಗೆ ಶ್ರೀ ನರೇಂದ್ರ ಮೋದಿಯವರ ಯಶಸ್ವಿ ಎರಡನೇ ಅವಧಿಯಲ್ಲಿ ಮಾಡಿದ ಭಾಷಣಗಳ ಸಂಗ್ರಹಗಳು ಇದಾಗಿವೆ. ಈ ಪುಸ್ತಕಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಕಾಶನ ವಿಭಾಗವು ಸಂಕಲಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾಷಣಗಳು ನಿರಂತರವಾಗಿ ಸ್ಫೂರ್ತಿಯ ಮೂಲವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಅವರ ಪ್ರತಿಯೊಂದು ಭಾಷಣವು ಕಲಿಯಬೇಕಾದ ಅಮೂಲ್ಯವಾದ ಪಾಠಗಳನ್ನು ಒಳಗೊಂಡಿರುತ್ತದೆ. ಒಳನೋಟವುಳ್ಳ ವಿಷಯಗಳ ಸಮೃದ್ಧಿಯಿಂದಾಗಿ ಪುಸ್ತಕಕ್ಕೆ ಭಾಷಣಗಳನ್ನು ಆಯ್ಕೆ ಮಾಡುವುದು ಸವಾಲಿನ ಸಂಗತಿಯಾಯಿತು ಎಂದು ಅವರು ಹೇಳಿದರು.

ಈ ಪುಸ್ತಕದ ಒಂದು ಸಂಪುಟದಲ್ಲಿ 86 ಸ್ಪೂರ್ತಿದಾಯಕ ಭಾಷಣಗಳನ್ನು ಮತ್ತು ಇನ್ನೊಂದು ಸಂಪುಟದಲ್ಲಿ 80 ಸ್ಪೂರ್ತಿದಾಯಕ ಭಾಷಣಗಳಿವೆ ಎಂದು ಸಚಿವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ಹಲವು ಪ್ರಮುಖ ವಿಷಯಗಳ ಮೇಲಿನ ಆಯ್ದ ಭಾಷಣಗಳನ್ನು ಸಂಕಲಿಸಲಾಗಿದೆ. ಸ್ಟಾರ್ಟ್ ಅಪ್ ಇಂಡಿಯಾ, ಉತ್ತಮ ಆಡಳಿತ, ಮಹಿಳಾ ಸಬಲೀಕರಣ, ರಾಷ್ಟ್ರ ಶಕ್ತಿ, ಸ್ವಾವಲಂಬಿ ಭಾರತ, ಜೈ ವಿಜ್ಞಾನ, ಜೈ ಕಿಸಾನ್ ಮುಂತಾದ ವಿಷಯಗಳ ಕುರಿತು ಜನಸಾಮಾನ್ಯರನ್ನು ಉದ್ದೇಶಿಸಿ ಪ್ರಧಾನಿಯವರು ಮಾಡಿದ ಭಾಷಣಗಳು ಇದರಲ್ಲಿವೆ.

 

ಇವುಗಳಲ್ಲಿ ತಿಳಿದುಕೊಳ್ಳುವುದು ಮತ್ತು ಕಲಿಯುವುದು ಬಹಳಷ್ಟಿದೆ, ಆದ್ದರಿಂದ ಯುವಜನರು ಮತ್ತು ಸಂಶೋಧಕರು ಈ ಪುಸ್ತಕಗಳನ್ನು ಕಡ್ಡಾಯವಾಗಿ ಓದಬೇಕು ಎಂದು ಸಚಿವರು ಒತ್ತಾಯಿಸಿದರು. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಇಳಿಸಿದ ಭಾರತದ ಗಮನಾರ್ಹ ಸಾಧನೆಯನ್ನು ಶ್ರೀ ಠಾಕೂರ್ ಶ್ಲಾಘಿಸಿದರು.

ಯುಪಿಐ ಮತ್ತು ಭೀಮ್ ನಂತಹ ಅಪ್ಲಿಕೇಶನ್ ಗಳನ್ನು ಉಲ್ಲೇಖಿಸಿದ ಕೇಂದ್ರ ಸಚಿವರು, ಡಿಜಿಟಲ್ ಪಾವತಿಗಳ ಜಗತ್ತಿನಲ್ಲಿ ಈಗ ವಹಿವಾಟಿನ ಗರಿಷ್ಠ ಶೇಕಡಾ 46 ರಷ್ಟು ಭಾರತದಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಹಿಂದಿನ ಸರ್ಕಾರಗಳ ಅವಧಿಗಳಿಗೆ ಹೋಲಿಸಿದರೆ, ಈಗ 45 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ, ಇದೀಗ ನೇರ ಲಾಭ ವರ್ಗಾವಣೆ (ಡಿಬಿಟಿ) ವ್ಯವಸ್ಥೆಯ ಮೂಲಕ ಫಲಾನುಭವಿಗಳನ್ನು ಪರಿಣಾಮಕಾರಿಯಾಗಿ ತಲುಪುತ್ತಿದೆ ಎಂದು ಅವರು ಹೇಳಿದರು.

ಯುವಜನತೆಯ ಪ್ರಮುಖ ಪಾತ್ರವನ್ನು ಪ್ರಸ್ತಾಪಿಸಿದ ಶ್ರೀ ಠಾಕೂರ್, ಭಾರತದ ಯುವಜನರು ಈಗ ಉದ್ಯೋಗ ನೀಡುವವರಾಗಿದ್ದಾರೆ. ವಿಶ್ವಕ್ಕೆ ಹೋಲಿಸಿದರೆ ಭಾರತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸ್ಟಾರ್ಟಪ್ ಗಳಿವೆ ಎಂದು ಹೇಳಿದರು.

 

ವಿಶ್ವದಲ್ಲೇ ಅತ್ಯಂತ ಅಗ್ಗದ ಡೇಟಾ ಈಗ ಭಾರತದಲ್ಲಿ ಲಭ್ಯವಿದೆ ಎಂದು ಶ್ರೀ ಠಾಕೂರ್ ಹೇಳಿದರು. ರಾಷ್ಟ್ರವು ತನ್ನದೇ ಆದ 5ಜಿ ತಂತ್ರಜ್ಞಾನವನ್ನು ರೂಪಿಸಿದೆ ಮತ್ತು ಭವಿಷ್ಯದಲ್ಲಿ 6ಜಿ ತಂತ್ರಜ್ಞಾನವನ್ನು ರೂಪಿಸಲು ಹೊರಟಿದೆ. ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವದಲ್ಲಿ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು.

ಮಧ್ಯಪ್ರದೇಶ ರಾಜ್ಯದ ಪ್ರಗತಿಯನ್ನು ಶ್ಲಾಘಿಸಿದ ಶ್ರೀ ಠಾಕೂರ್, ಈ ಹಿಂದೆ ಮಧ್ಯಪ್ರದೇಶವನ್ನು ಬಿಮಾರು ರಾಜ್ಯ ಎಂದು ಕರೆಯಲಾಗುತ್ತಿತ್ತು, ಆದರೆ ಹೊಸ ಸರ್ಕಾರ ರಚನೆಯಾದ ನಂತರ ರಾಜ್ಯವು ದೇಶದ ಪ್ರಮುಖ ಮತ್ತು ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಮಾತೃಭಾಷೆಯ ಶಿಕ್ಷಣದಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದು, ಮಧ್ಯಪ್ರದೇಶದಲ್ಲಿ ಮಾತ್ರ ಹಿಂದಿಯಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ಪಠ್ಯಕ್ರಮ ಸಿದ್ಧಪಡಿಸಲಾಗಿದೆ ಎಂದರು. ಕಲಿಯುತ್ತ ಸಂಪಾದಿಸಿ (ಸೀಖೋ ಕಮಾವೋ) ಯೋಜನೆ ಒಂದು ವಿಶಿಷ್ಟ ಯೋಜನೆಯಾಗಿದ್ದು, ಇಲ್ಲಿಯವರೆಗೆ 86 ಸಾವಿರಕ್ಕೂ ಹೆಚ್ಚು ನೋಂದಣಿಗಳನ್ನು ಮಾಡಲಾಗಿದೆ ಮತ್ತು ಮಧ್ಯಪ್ರದೇಶವು ಖೇಲೋ ಇಂಡಿಯಾ ಯುವ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಿತು ಎಂದು ಸಚಿವರು ಹೇಳಿದರು.

ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಪುಸ್ತಕಗಳನ್ನು ಓದುವಂತೆ ಯುವಜನರಲ್ಲಿ ಮನವಿ ಮಾಡಿದರು. ಇದೊಂದು ಅಮೂಲ್ಯವಾದ ನಿಧಿ ಮತ್ತು ತಿಳುವಳಿಕೆಯ ಮುತ್ತುಗಳು ಇದರಲ್ಲಿವೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರ ‘ಮನ್ ಕಿ ಬಾತ್’ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಜನಸಾಮಾನ್ಯರ ಧ್ವನಿಗೆ ವೇದಿಕೆಯಾಗಿದೆ. ಇದು ಪ್ರಧಾನಿಯವರ ಸ್ಫೂರ್ತಿಯ ಸಾರವನ್ನು ತನ್ನೊಳಗೆ ಹೊಂದಿರುವ ಅದ್ಭುತ ಉಪಕ್ರಮವಾಗಿದೆ ಎಂದು ಹೇಳಿದರು.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ದೂರದೃಷ್ಟಿಯ ಪ್ರಧಾನಮಂತ್ರಿ ಎಂದು ವಿವರಿಸುವ ಈ ಪುಸ್ತಕವನ್ನು ಖಂಡಿತವಾಗಿ ಓದಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು ಮತ್ತು ಪ್ರಧಾನಿಯವರೊಂದಿಗಿನ ತಮ್ಮ ಅವರು ನೆನಪುಗಳನ್ನು ಮೆಲುಕು ಹಾಕಿದರು.

ಇಂದೋರ್ ಗೆ ಪ್ರತಿಷ್ಠಿತ ಅತ್ಯುತ್ತಮ ಸ್ಮಾರ್ಟ್ ಸಿಟಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ಅವರು ಹೇಳಿದರು, ನಗರವು ರಾಷ್ಟ್ರವ್ಯಾಪಿ ಸ್ಮಾರ್ಟ್ ಸಿಟಿಗಳ ಕ್ಷೇತ್ರದಲ್ಲಿ ತನ್ನ ಶ್ರೇಷ್ಠತೆಯನ್ನು ಸ್ಥಾಪಿಸಿದೆ. ಅದೇ ಸಮಯದಲ್ಲಿ, ಮಧ್ಯಪ್ರದೇಶಕ್ಕೆ ಭಾರತೀಯ ಸ್ಮಾರ್ಟ್ ಸಿಟಿ ವಿಭಾಗದಲ್ಲಿ ಅತ್ಯುತ್ತಮ ರಾಜ್ಯ ಪ್ರಶಸ್ತಿಯನ್ನು ಸಹ ನೀಡಲಾಗಿದೆ. ಇಂದೋರ್ ಸ್ವಚ್ಛತೆಯ ಸಮೀಕ್ಷೆಯಲ್ಲಿ ಸತತವಾಗಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ ಎಂಬುದು ಗಮನಿಸಬೇಕಾದ ಸಂಗತಿ ಎಂದು ಅವರು ಹೇಳಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ವಿಕ್ರಮ್ ಸಹಾಯ್ ಅವರ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು ಮತ್ತು ನಂತರ ಪುಸ್ತಕಗಳನ್ನು ಆಧರಿಸಿದ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಖಜುರಾಹೊ ಸಂಸದ ಶ್ರೀ ವಿ.ಡಿ.ಶರ್ಮಾ ಅವರು ಸಮಾರಂಭದಲ್ಲಿ ಭಾಗವಹಿಸಿದರು. ಪ್ರಕಾಶನ ವಿಭಾಗದ ಮಹಾನಿರ್ದೇಶಕಿ ಶ್ರೀಮತಿ ಅನುಪಮಾ ಭಟ್ನಾಗರ್ ವಂದಿಸಿದರು.

 

ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ‘9 ವರ್ಷಗಳು: ಸೇವಾ, ಸುಶಾಸನ್ ಔರ್ ಗರೀಬ್ ಕಲ್ಯಾಣ್’ ಜೊತೆಗೆ ‘ನಯಾ ಭಾರತ: ಸಶಕ್ತ ಭಾರತ’ ವಿಷಯದ ಕುರಿತು ಕೇಂದ್ರೀಯ ಸಂವಹನ ಬ್ಯೂರೋ ಆಯೋಜಿಸಿದ್ದ ಬಹು-ಮಾಧ್ಯಮ ಪ್ರದರ್ಶನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ಪ್ರಕಾಶನ ವಿಭಾಗವು ತನ್ನ ಪ್ರಕಟಿತ ಪುಸ್ತಕಗಳನ್ನು ಪ್ರದರ್ಶಿಸುವ ಮಳಿಗೆಯನ್ನು ಸ್ಥಾಪಿಸಿತ್ತು, ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಅವುಗಳನ್ನು ಅನ್ವೇಷಿಸಲು ಮತ್ತು ಖರೀದಿಸಲು ಅವಕಾಶ ಒದಗಿಸಿತು.

RELATED ARTICLES
- Advertisment -
Google search engine

Most Popular

Recent Comments