Wednesday, November 29, 2023
Homeಇದೀಗ ಬಂದ ತಾಜಾ ಸುದ್ದಿಕರಿಷ್ಮಾ ಆಹುಜಾ- ಕಾದಂಬರಿ ಉತ್ಸವ 23

ಕರಿಷ್ಮಾ ಆಹುಜಾ- ಕಾದಂಬರಿ ಉತ್ಸವ 23

ದೇವ ಜಗನ್ನಾಥನ ನಾಡಿನ `ಒಡಿಸ್ಸಿ’- ಸೊಬಗಿನ ನೃತ್ಯಶೈಲಿಯಲ್ಲಿ ಗುರು ರತಿಕಾಂತ್ ಮೋಹಪಾತ್ರ, ರಾಜಶ್ರೀ ಪ್ರಹರಾಜ್ ಮತ್ತು ಶರ್ಮಿಳಾ ಮುಖರ್ಜಿ ಅವರ ಬಳಿ ತರಬೇತಿ ಪಡೆದು ದೂರದರ್ಶನದ ಗ್ರೇಡೆಡ್ ಕಲಾವಿದೆಯಾಗಿರುವ ಕರಿಷ್ಮಾ ಅಹುಜಾ ದೇಶ-ವಿದೇಶಗಳ ಅನೇಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡುತ್ತಿರುವ ಅಂತರರಾಷ್ಟ್ರೀಯ ಖ್ಯಾತ ಕಲಾವಿದೆ.
ಬೆಂಗಳೂರು ದಕ್ಷಿಣಭಾಗ ಹಾಗೂ ಚೆನ್ನೈನಲ್ಲಿ ತಮ್ಮದೇ ಆದ ‘ಕಾದಂಬರಿ’ ನೃತ್ಯಸಂಸ್ಥೆ (1917) ಯ ಮೂಲಕ ಮಕ್ಕಳಿಗೆ ಬದ್ಧತೆಯಿಂದ ಉತ್ತಮ ಗುಣಮಟ್ಟದ ಒಡಿಸ್ಸಿ ನೃತ್ಯವನ್ನು ಕರಿಷ್ಮಾ ಕಲಿಸುತ್ತಿದ್ದು, ಪ್ರತಿವರ್ಷ 2019 ರಿಂದ ವಿವಿಧ ನೃತ್ಯ ಶೈಲಿಗಳ ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸಲು ಅವರು ‘ಕಾದಂಬರಿ ನೃತ್ಯೋತ್ಸವ’ವನ್ನು ಆಯೋಜಿಸುತ್ತ ಬಂದಿದ್ದಾರೆ. ಇವರ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ನೃತ್ಯೋತ್ಸವಗಳಲ್ಲಿ ಪಾಲ್ಗೊಂಡು ಮೆಚ್ಚುಗೆ ಹಾಗೂ ಅನೇಕ ಬಹುಮಾನಗಳನ್ನು ಪಡೆದುಕೊಂಡಿರುವುದು ಕಾದಂಬರಿಯ ಅಗ್ಗಳಿಕೆ.


ಪ್ರಸ್ತುತ ಇದೇ ತಿಂಗಳು 26 ಶನಿವಾರದಂದು ಬೆಳಗ್ಗೆ 10.30 ಕ್ಕೆ ಮಲ್ಲೇಶ್ವರದ ಸೇವಾಸದನ ರಂಗಮಂದಿರದಲ್ಲಿ ‘ಕಾದಂಬರಿ ಉತ್ಸವ 2023’ ನೃತ್ಯೋತ್ಸವವನ್ನು ಆಯೋಜಿಸಿದೆ. ಈ ಉತ್ಸವದಲ್ಲಿ ಕರಿಷ್ಮಾ ಅಹುಜಾ ಮತ್ತು ಅವರ ಶಿಷ್ಯರು, ಮುಂಬೈನ ಕಲಪಿ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ನ ಗುರು ಕೇಕ ಸಿನ್ಹಾ ಅವರಿಂದ ಕಥಕ್ ನೃತ್ಯ ಮತ್ತು ತೈವಾನ್ ನ ಚಿಂಗ್-ಹ್ಯಾನ್, ವೆಂಗ್ ಅವರಿಂದ ಸುಮನೋಹರ ಒಡಿಸ್ಸಿ ನೃತ್ಯ ಪ್ರದರ್ಶನಗಳು ಇರುತ್ತವೆ.
ಮುಂಬೈನ ‘ಕಲಪಿ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್’ ನ ಗುರು ಕೇಕ ಸಿನ್ಹಾ ದೂರದರ್ಶನದ ಗ್ರೇಡೆಡ್ ಆರ್ಟಿಸ್ಟ್, ಇ.ಜೆಡ್.ಸಿ.ಸಿ. ಮಾನ್ಯತೆ ಪಡೆದ ಕಲಾವಿದೆಯಾಗಿದ್ದು, ಖ್ಯಾತ ನೃತ್ಯ ಸಂಯೋಜಕಿಯೂ ಆಗಿದ್ದು ಅಂತರರಾಷ್ಟ್ರೀಯ ಕಲಾವಿದೆಯಾಗಿ ಹೆಸರುವಾಸಿಯಾಗಿದ್ದಾರೆ. ಉಪನ್ಯಾಸ ಮತ್ತು ಪ್ರಾತ್ಯಕ್ಷಿಕ ಕಾರ್ಯಶಿಬಿರಗಳನ್ನು ನಡೆಸುವುದರಲ್ಲೂ ನಿಷ್ಣಾತರು.


ತೈವಾನ್ ನಲ್ಲಿ ನೆಲೆಸಿರುವ ಚಿಂಗ್-ಹ್ಯಾನ್, ವೆಂಗ್ ತೈವಾನ್ ಒಡಿಸ್ಸಿ ಪ್ರೊಮೋಷನ್ ಸೆಂಟರ್ ಸ್ಥಾಪಕಿಯಾಗಿದ್ದು ಈಕೆ ಒಡಿಸ್ಸಿ ನೃತ್ಯದಲ್ಲಿ ಪರಿಣತಿ ಪಡೆದಿದ್ದು, ಆಗಾಗ ಅವರನ್ನು ಭಾರತದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು, ಭಾರತ ಮತ್ತು ತೈವಾನ್ ಗೆ ಆಹ್ವಾನಿಸಲಾಗುತ್ತದೆ.
ಕಣ್ಮನ ತುಂಬುವ ಈ ಸುಮನೋಹರ ನೃತ್ಯ ವೈವಿಧ್ಯಗಳನ್ನು ವೀಕ್ಷಿಸಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ.


ಸಮಾರಂಭದಲ್ಲಿ ಖ್ಯಾತ ಲೇಖಕಿ, ರಂಗಕರ್ಮಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ ವೈ.ಕೆ.ಸಂಧ್ಯಾ ಶರ್ಮ, ಭರತನಾಟ್ಯ ಕಲಾವಿದ ರುದ್ರ ರೈ( ಚಾರ್ಲ್ಸ್ ಮ) ಮತ್ತು ಸಾಯಿ ಆರ್ಟ್ಸ್ ಇಂಟರ್ನ್ಯಾಷನಲ್-ನಿರ್ದೇಶಕ ಸಾಯಿ ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ.
*******
ವೈ.ಕೆ.ಸಂಧ್ಯಾ ಶರ್ಮ

RELATED ARTICLES
- Advertisment -
Google search engine

Most Popular

Recent Comments