ದೇಶೀಯ ತಂತ್ರಜ್ಞಾನ ಆವಿಷ್ಕಾರವನ್ನು ಉತ್ತೇಜಿಸಲು ಸರ್ಕಾರ ಗಮನ ಮುಂದುವರಿಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು
ಬೆಂಗಳೂರಿನಲ್ಲಿ ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡ ಉದ್ಘಾಟಿಸಿದ ಸಚಿವರು
ಬೆಂಗಳೂರಿನಲ್ಲಿ ಉಪನಗರ ರೈಲ್ವೆ ಸೇವೆಗಳ ಬಗ್ಗೆ ಸರ್ಕಾರದ ಬದ್ಧತೆ ಹಾಗೆಯೇ ಉಳಿದಿದೆ ಎಂದು ಹೇಳಿದರು
ಪ್ರಧಾನಿ ನರೇಂದ್ರ ಮೋದಿಯವರ ಬಲಿಷ್ಠ ನಾಯಕತ್ವದಲ್ಲಿ ಭಾರತವು ಸ್ಥಳೀಯ ಸೊಗಡಿನೊಂದಿಗೆ ತಂತ್ರಜ್ಞಾನ ನಾವೀನ್ಯತೆಯಲ್ಲಿ ದಾಪುಗಾಲು ಹಾಕುತ್ತಿದೆ ಎಂದು ಕೇಂದ್ರ ರೈಲ್ವೆ, ಸಂವಹನ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು. ಅಗತ್ಯವಾದ ಅನುಕೂಲಕರ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿರುವ, ಕೇಂದ್ರ ಸರ್ಕಾರವು, ನಮ್ಮ ವಿಜ್ಞಾನಿಗಳು ಮತ್ತು ತಂತ್ರಜ್ಞರನ್ನು ಹೊಸ ಆವಿಷ್ಕಾರಗಳಿಗೆ ಪ್ರೇರೇಪಿಸಲು ಬದ್ಧವಾಗಿದೆ ಎಂದು ಹೇಳಿದರು. ಇದೇ ಮೊದಲ ಬಾರಿಗೆ ಭಾರತದಲ್ಲಿ ಟೆಲಿಕಾಂ ಉಪಕರಣಗಳನ್ನು ತಯಾರಿಸಲಾಗುತ್ತಿದೆ. ದೇಶವು ದೇಶೀಯವಾಗಿ 4ಜಿ ಮತ್ತು 5ಜಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. ʻವಂದೇ ಭಾರತ್ʼನಂತಹ ವಿಶ್ವದರ್ಜೆಯ ರೈಲುಗಳನ್ನು ವಿನ್ಯಾಸಗೊಳಿಸಬಹುದು ಮತ್ತು ತಯಾರಿಸಬಹುದು ಎಂದು ಭಾರತ ಸಾಬೀತುಪಡಿಸಿದೆ ಎಂದು ಸಚಿವರು ಹೇಳಿದರು.
ಬೆಂಗಳೂರಿನಲ್ಲಿ ಇಂದು ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡವನ್ನು ವರ್ಚುವಲ್ ಮೂಲಕ ಉದ್ಘಾಟಿಸಿದ ನಂತರ ಸಭಿಕರನ್ನುದ್ದೇಶಿಸಿ ಸಚಿವರು ಮಾತನಾಡಿದರು. 3ಡಿ ಮುದ್ರಣವು ಈಗ ನವೋದ್ಯಮಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿರುವ ʻಪ್ರಾತ್ಯಕ್ಷಿಕೆʼ ತಂತ್ರಜ್ಞಾನವಾಗಿದೆ. ಇದು ವೆಚ್ಚ ಉಳಿತಾಯದ, ಪರಿಸರ ಸ್ನೇಹಿ ಮತ್ತು “ಆತ್ಮನಿರ್ಭರ ಭಾರತ್” ಪರಿಕಲ್ಪನೆಯನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು.
ನಗರದ ಕೇಂಬ್ರಿಡ್ಜ್ ಲೇಔಟ್ ನಲ್ಲಿರುವ ಹೊಸ ಅಂಚೆ ಕಚೇರಿ ಕಟ್ಟಡವನ್ನು ಐಐಟಿ ಮದ್ರಾಸ್ ಮತ್ತು ʻಎಲ್ ಅಂಡ್ ಟಿʼಯ ತಾಂತ್ರಿಕ ಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ಕಟ್ಟಡ ಉದ್ಘಾಟನೆಯ ಸಂದರ್ಭದಲ್ಲಿ ಈ ಮಾದರಿ ಯೋಜನೆಯ ಕಿರು ವೀಡಿಯೊವನ್ನು ಸಹ ಪ್ರಸಾರ ಮಾಡಲಾಯಿತು.
ಬಳಿಕ ಸಚಿವರು 3 ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡದ ಮೇಲೆ ವಿಶೇಷ ಕವರ್ ಅನ್ನು ಬಿಡುಗಡೆ ಮಾಡಿದರು, ಜೊತೆಗೆ ಅದರ ಪ್ರತಿಕೃತಿಯನ್ನು ಅನಾವರಣಗೊಳಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಉಪ-ನಗರ ರೈಲು ಸೇವೆಯನ್ನು ಪ್ರಾರಂಭಿಸುವ ಕೇಂದ್ರ ಸರ್ಕಾರದ ಬದ್ಧತೆ ಹಾಗೆಯೇ ಉಳಿದಿದೆ ಎಂದು ಹೇಳಿದರು. ಶರವೇಗದ ರೈಲುಗಳ ಓಡಾಟಕ್ಕಾಗಿ 4000 ಕಿ.ಮೀ ರೈಲ್ವೆ ಹಳಿಗಳನ್ನು ನವೀಕರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಮುಂದಿನ ನಾಲ್ಕರಿಂದ ಐದು ವರ್ಷಗಳಲ್ಲಿ ಹೆಚ್ಚಿನ ʻವಂದೇ ಭಾರತ್ʼ ರೈಲುಗಳನ್ನು ಓಡಿಸಲು ಅನುವು ಮಾಡಿಕೊಡಲು ಹಳಿಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದಿ ಮಾಹಿತಿ ನೀಡಿದರು.
ʻಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ-2023ʼ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಇದು ಸಮಾಜದ ಎಲ್ಲಾ ವಿಭಾಗಗಳನ್ನು ಒಳಗೊಂಡ “ಸಮತಲ ಕಾಯ್ದೆ”ಯಾಗಿದೆ ಎಂದು ಅಭಿಪ್ರಾಯಪಟ್ಟರು. ತಜ್ಞರು ಮತ್ತು ವಿವಿಧ ಮಧ್ಯಸ್ಥಗಾರರೊಂದಿಗೆ ವ್ಯಾಪಕವಾದ ಸಮಾಲೋಚನೆಗಳ ನಂತರ ಇದನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಸಂಸದರಾದ ಶ್ರೀ ಪಿ.ಸಿ.ಮೋಹನ್ ಮತ್ತು ಶ್ರೀ ಸದಾನಂದ ಗೌಡ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಐಐಟಿ ಮದ್ರಾಸ್ ನ ಸಿವಿಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಮತ್ತು ಡೀನ್ ಪ್ರೊ. ಮನು ಸಂತಾನಮ್ ಅವರು 3ಡಿ ಮುದ್ರಿತ ಅಂಚೆ ಕಚೇರಿ ನಿರ್ಮಾಣದ ತಾಂತ್ರಿಕ ವಿವರಗಳನ್ನು ಹಂಚಿಕೊಂಡರು.
ಇದಕ್ಕೂ ಮುನ್ನ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಶ್ರೀ ರಾಜೇಂದ್ರ ಕುಮಾರ್ ಅವರು ತಮ್ಮ ಪರಿಚಯಾತ್ಮಕ ಭಾಷಣದಲ್ಲಿ ತಂತ್ರಜ್ಞಾನ ಆಧಾರಿತ 3ಡಿ ಮುದ್ರಿತ ಅಂಚೆ ಕಚೇರಿಯ ಉದ್ದೇಶಗಳನ್ನು ವಿವರಿಸಿದರು.
**
ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿರುವ ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ನಮ್ಮ ರಾಷ್ಟ್ರದ ನಾವೀನ್ಯತೆ ಮತ್ತು ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,
“ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿ ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಉದ್ಘಾಟನೆಯಾಗಿರುವುದನ್ನು ನೋಡಲು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯಾಗುತ್ತದೆ. ಇದು ನಮ್ಮ ರಾಷ್ಟ್ರದ ಆವಿಷ್ಕಾರ ಮತ್ತು ಪ್ರಗತಿಗೆ ಸಾಕ್ಷಿಯಾಗುವುದರ ಜೊತೆಗೆ ಸ್ವಾವಲಂಬಿ ಭಾರತದ ಮನೋಭಾವ ಹೊಂದಿದೆ. ಅಂಚೆ ಕಚೇರಿ ಪೂರ್ಣಗೊಳಿಸಲು ಶ್ರಮಿಸಿದ ಎಲ್ಲರಿಗೂ ಈ ಸಂದರ್ಭದಲ್ಲಿ ಅಭಿನಂದನೆಗಳು” ಎಂದು ಬರೆದುಕೊಂಡಿದ್ದಾರೆ.