ತುಮಕೂರು: “ಭಾರತದ ಸ್ವಾತಂತ್ರ್ಯ ಹೋರಾಟಗಾರರ ಕಥನವನ್ನು ಕಟ್ಟಿಕೊಡುವಲ್ಲಿ, ಕ್ರಾಂತಿಕಾರಿಗಳ ಹೋರಾಟಮಯ ಬದುಕನ್ನು ಕಡೆಗಣಿಸಲಾಗಿದೆ. ಈ ಲೋಪವನ್ನು ಸರಿಪಡಿಸುವ ಕೆಲಸ ಅತ್ಯಂತ ಜರೂರಾಗಿ ಆಗಬೇಕಿದೆ” ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರವರು ತಿಳಿಸಿದರು. ಕನ್ನಡಿಗರ ಆಲದ ಮರ ಪಾಕ್ಷಿಕ ಪತ್ರಿಕೆಯ ವತಿಯಿಂದ ಹೊರತರಲಾದ ಸ್ವಾತಂತ್ರ್ಯ ದಿನಾಚರಣೆ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
“ದೇಶ ಈಗ ಸಮರ್ಥ ನಾಯಕನ ಕೈಯಲ್ಲಿದೆ. ವಿದೇಶಗಳಲ್ಲಿ ಭಾರತಕ್ಕೆ ಮಹತ್ವದ ಗೌರವದ ಸ್ಥಾನ ದೊರಕಿದೆ. ಇದು ಸ್ವಾತಂತ್ರ್ಯದ 75 ವರ್ಷಗಳ ನಂತರ ಭಾರತಕ್ಕೆ ದೊರೆತಿರುವ ಅಂತರಾಷ್ಟ್ರೀಯ ಮಟ್ಟದ ಮನ್ನಣೆಯಾಗಿದೆ” ಎಂದು ತುಮಕೂರು ನಗರ ಶಾಸಕರಾದ ಜ್ಯೋತಿ ಗಣೇಶ್ ರವರು ತಿಳಿಸಿದರು.
“ಸ್ವಾತಂತ್ರ್ಯ ನಂತರದ 75 ವರ್ಷಗಳಲ್ಲಿ ಆಗಿರುವ ಅನೇಕ ಲೋಪಗಳನ್ನು ಸರಿಪಡಿಸಬೇಕಿದೆ. ಕೇವಲ ಇಬ್ಬರು -ಮೂವರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಇರುವ ತಿರುಚಿದ ಇತಿಹಾಸದ ಬದಲು ಸ್ವಾತಂತ್ರ್ಯಕ್ಕಾಗಿ ಬಲಿದಾನವಾದವರ ಇತಿಹಾಸ ರೂಪುಗೊಳ್ಳಬೇಕು” ಎಂದು ತುಮಕೂರು ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ರವರು ತಿಳಿಸಿದರು.
“ಸ್ವಾತಂತ್ರ್ಯಕ್ಕಾಗಿ ಬಲಿದಾನವಾದ 6 ಲಕ್ಷಕ್ಕೂ ಅಧಿಕ ಹೋರಾಟಗಾರರು ಇನ್ನೂ ಅನಾಮಧೇಯರಾಗಿಯೇ ಉಳಿತಿದ್ದಾರೆ. ಕೇವಲ 2-3 ಜನರ ಹೋರಾಟದ ಕಥನ ಇತಿಹಾಸದ ಸಾವಿರಾರು ಪುಟಗಳನ್ನು ಆವರಿಸಿಕೊಂಡಿದೆ. ಆದರೆ ಇವರು ಸ್ವಾತಂತ್ರ್ಯಕ್ಕಾಗಿ ಬಲಿದಾನವಾಗಲಿಲ್ಲ. ಆದರೆ ಬಲಿದಾನವಾದ ಹೋರಾಟಗಾರರ ಕಥನ ಇತಿಹಾಸದಲ್ಲಿ ದಾಖಲಾಗಿಲ್ಲ. ಇದು ನಮ್ಮ ದೇಶದ ದೊಡ್ಡ ವಿಪರ್ಯಾಸವಾಗಿದೆ. ಇಂತಹ ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರ ಕಥನವನ್ನು ಇತಿಹಾಸದಲ್ಲಿ ಸೇರಿಸಲು ನಾವೆಲ್ಲ ಒತ್ತಾಯಿಸಬೇಕಿದೆ. ಕನ್ನಡಿಗರ ಆಲದಂಬರ ಪತ್ರಿಕೆಯ ವತಿಯಿಂದ ಇನ್ನು ಹತ್ತು ವರ್ಷಗಳಲ್ಲಿ ಇಂತಹ 600 ಜನ ಹೋರಾಟಗಾರರ ಹೋರಾಟದ ಕಥನವನ್ನು ನಾಡಿನ ಮುಂದೆ ತೆರೆದಿಡುವುದಾಗಿ ಲೇಖಕ, ಚಿಂತಕ ಮಣ್ಣೆ ಮೋಹನ್ ತಿಳಿಸಿದರು.
“ಸ್ವಾತಂತ್ರ್ಯದ ಸಂದರ್ಭದಲ್ಲಿ ದೇಶಕ್ಕೆ ಒಲಿದಾನವಾದ ಸ್ವಾತಂತ್ರ್ಯ ವೀರರ ಲೇಖನಗಳ ಸರಮಾಲೆಯನ್ನು ಒಳಗೊಂಡ ವಿಶೇಷ ಸಂಚಿಕೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹ, ಹಾರೈಕೆ ಸದಾ ನಮ್ಮ ಮೇಲಿರಲಿ” ಎಂದು ಸಂಪಾದಕರಾದ ಸುಧೀಂದ್ರ ಕುಮಾರ್ ರವರು ತಿಳಿಸಿದರು. ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯಾಧ್ಯಕ್ಷರಾದ ರಾಘವೇಂದ್ರಾಚಾರ್, ಪ್ರಧಾನ ಕಾರ್ಯದರ್ಶಿಯಾದ ಆಶಾ ಸೀನಪ್ಪ, ನಿವೃತ್ತ ಕರ್ನಲ್ ಚನ್ನಪ್ಪ, ರೈತ ಸಂಘದ ದೇವರಾಜ್, ಸ್ನೇಹ ಕ್ರಿಯೇಷನ್ಸ್ ಪರಮೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದಾರಿದೀಪ ಅಂಧ ಸಂಸ್ಥೆಯ ಮಕ್ಕಳಿಗೆ ಪತ್ರಿಕೆ ವತಿಯಿಂದ 10,000 ರೂ.ಗಳನ್ನು ದೇಣಿಗೆಯಾಗಿ ನೀಡಲಾಯಿತು. ಹಾಗೆಯೇ ಕರ್ನಲ್ ಚೆನ್ನಪ್ಪನವರು ಸಹಾ 10,000 ರೂ.ಗಳನ್ನು ನೀಡಿದರು. ನರಸಿಂಹರಾಜುರವರು ಕಾರ್ಯಕ್ರಮವನ್ನು ನಿರೂಪಿಸಿದರು.