“13 ವರ್ಷದ ಹುಬ್ಬಳ್ಳಿಯ ಬಾಲಕ ಮಹೇಂದ್ರ ದೋನಿಯಿಂದ ಮೊದಲ್ಗೊಂಡು, ಶತಾಯುಷಿಯವರೆಗೆ ,6 ಲಕ್ಷ ಜನರು ನಮ್ಮ ಸ್ವಾತಂತ್ರಕ್ಕಾಗಿ ಬಲಿದಾನವಾಗಿದ್ದಾರೆ. ಆದರೆ ನಮ್ಮ ಇತಿಹಾಸ ಪುಸ್ತಕಗಳು ಕೇವಲ ಇಬ್ಬರು ಮೂವರ ಹೋರಾಟದ ಚರಿತ್ರೆಯನ್ನು ಮಾತ್ರ ದಾಖಲಿಸಿ, ಉಳಿದವರನ್ನು ಗೌಣವಾಗಿಸಿದ್ದಾರೆ. ನಾವೆಲ್ಲರೂ ಅಂತಹ ಅನಾಮದೇಯ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ರೂಪಿಸಬೇಕಿದೆ” ಎಂದು ಲೇಖಕ, ಚಿಂತಕ, ಅಂಕಣಕಾರ ಮಣ್ಣೆ ಮೋಹನ್ ತಿಳಿಸಿದರು. ಅವರು ಜಕ್ಕಸಂದ್ರದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಮುಂದುವರೆದ ಮಾತನಾಡಿದ ಅವರು ” ನಾವುಗಳು ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಎಂದು ಉತ್ಸಾಹದಿಂದ ಘೋಷಣೆ ಕೂಗುತ್ತಿದ್ದೇವೆ. ಆದರೆ ಬ್ರಿಟಿಷ್ ಸರ್ಕಾರದಲ್ಲಿ ಈ ರೀತಿ ಕೂಗಿದವರನ್ನು ಬಂಧಿಸಿ ಸೆರೆಮನೆಯಲ್ಲಿ ಇಡುತ್ತಿದ್ದರು. ಅಂತಹ ಘೋರ ಪರಿಸ್ಥಿತಿ ಆ ಕಾಲಘಟ್ಟದಲ್ಲಿ ಇತ್ತು. ಅಂತಹ ದಾಸ್ಯದಿಂದ ವಿಮುಕ್ತವಾದ ಇಂದಿನ ದಿನ ನಮಗೆಲ್ಲ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಒಂದು ಕಡೆಯಾದರೆ, ಸ್ವಾತಂತ್ರ್ಯಕ್ಕಾಗಿ ಬಲಿದಾನವಾದವರ ಶ್ರದ್ಧಾಂಜಲಿಯ ನೋವು ಇನ್ನೊಂದು ಕಡೆ ಆವರಿಸಿದೆ. ಅವರನ್ನು ಪ್ರತಿನಿತ್ಯ ಸ್ಮರಣೆ ಮಾಡುವ ಮೂಲಕ ನಾವು ಅವರಿಗೆ ನಿಜ ಅರ್ಥದಲ್ಲಿ ಶ್ರದ್ಧಾಂಜಲಿ ಸಲ್ಲಿಸಬೇಕಾಗಿದೆ. ಹಾಗಾಗಿ ನಿಮ್ಮ ಮನೆಗಳ ದೇವರ ಪಟಗಳ ಮಧ್ಯೆ, ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪಟವನ್ನು ಇಟ್ಟು, ಪ್ರತಿದಿನ ಅವರ ಸ್ಮರಣೆ ಮಾಡುವ ಹೊಸ ಸಾಂಪ್ರದಾಯವನ್ನು ನಾವೆಲ್ಲ ಆಚರಣೆಗೆ ತರಬೇಕಿದೆ” ಎಂದು ನೆರೆದಿದ್ದ ನೂರಾರು ಮಕ್ಕಳು, ಪೋಷಕರು ಮತ್ತು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಮಕ್ಕಳಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸ್ಥಳೀಯ ಉದ್ಯಮಿ ಮ್ಯಾಕೋ ಕಂಪನಿಯ ಜಿ ಆರ್ ಮಹೇಶ್ ರವರು ಶಾಲೆಯ ಮೈದಾನಕ್ಕೆ ಮೇಲ್ಚಾವಣಿ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು. ಫ್ಲೈಹುಡ್ ಕಂಪನಿಯ ವಿಠಲ್ ಪಟೇಲ್ ರವರು ಮಕ್ಕಳಿಗೆ ವಿವಿಧ ಬಗೆಯ ಆಟದ ಸಾಮಾನುಗಳನ್ನು ವಿತರಿಸಿದರು. ಶ್ರೀಮತಿ ಶೈಲಜಾರವರು ಶಾಲೆಯ ಎಲ್ಲಾ ಮಕ್ಕಳಿಗೆ ಐಡಿ ಕಾರ್ಡ್ ಗಳನ್ನು ಕೊಡುಗೆಯಾಗಿ ನೀಡಿದರು. ಚಿಕ್ಕನಾಗಯ್ಯ ಮಾಜಿ ಅಧ್ಯಕ್ಷರು ಗ್ರಾಂ ,ಪಂ. ಆರ್ ಲೋಕೇಶ್ ಅಧ್ಯಕ್ಷರು ಎಸ್ ಡಿ ಎಂ ಸಿ. ನರಸಿಂಹಮೂರ್ತಿ. ಹುಚ್ಚಪ್ಪ ಮಾ ಗ್ರಾ ಪಂ ಸದಸ್ಯರು, ಪ್ರಕಾಶ್ ಮೂರ್ತಿ ಪ್ರ.ಕಾರ್ಯದರ್ಶಿ ಕಸಾಪ, . ಪ್ರಕಾಶ್ ಮುಖ್ಯ ಶಿಕ್ಷಕರು, ಗ್ರಾಮದ ಹಿರಿಯರಾದ ಗಂಗಯ್ಯ , ಚಿಕ್ಕಣ್ಣ, ಎಸ್ ಡಿ ಎಂ ಸಿ ಸದಸ್ಯರು, ಶಾಲಾ ಶಿಕ್ಷಕರು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.