ಯಾವುದೇ ವಿಷಯವನ್ನಾಗಲೀ ಆಳವಾಗಿ ಅಭ್ಯಾಸ ಮಾಡುವ ಆಕಾಂಕ್ಷೆಯುಳ್ಳ ಶ್ರೀರಕ್ಷಾ ರವಿ ಹೆಗ್ಡೆ ವಿಶೇಷ ಪ್ರತಿಭೆಯ ನೃತ್ಯಕಲಾವಿದೆ. ತಾಯಿ ಮತ್ತು ಗುರು ಪ್ರಸಿದ್ಧ ನೃತ್ಯಜ್ಞೆ ಡಾ. ಜಯಶ್ರೀ ರವಿ ‘ಲಯಾಭಿನಯ ಕಲ್ಚುರಲ್ ಫೌಂಡೇಶನ್’ ನ ಸ್ಥಾಪಕಿ ಮತ್ತು ವಿಶ್ವವಿಖ್ಯಾತಿಯ ಹಿರಿಯ ನೃತ್ಯಪಟು ಡಾ. ಸುಂದರಿ ಸಂತಾನಂ ಅವರ ಮಾರ್ಗದರ್ಶನದಲ್ಲಿ 108 ಮಾರ್ಗದ ‘ಕರಣ’ಗಳನ್ನು ಅಭ್ಯಾಸ ಮಾಡಿದವರು. ವಿಶ್ವಾದ್ಯಂತ ನೃತ್ಯಪ್ರದರ್ಶನಗಳನ್ನು ನೀಡಿ ಸನ್ಮಾನ್ಯರಾದ ಇಂಥ ವಿದುಷಿ ಗುರುಗಳ ಬಳಿ ತರಬೇತಿ ಪಡೆಯುತ್ತಿರುವ ಶ್ರೀರಕ್ಷಾ ಕೂಡ 108 ಕರಣಗಳನ್ನು ಕಲಿತು, ಭರತನಾಟ್ಯದಲ್ಲಿ ದೀರ್ಘಕಾಲ ಅಭ್ಯಾಸ ಮಾಡಿದ ಬದ್ಧತೆಯ ನೃತ್ಯಾಕಾಂಕ್ಷಿ. ಶಾಸ್ತ್ರೀಯ ಸಂಗೀತ, ಯೋಗ, ನೃತ್ಯ ಸಂಯೋಜನೆ, ಪ್ರದರ್ಶನ, ಯಕ್ಷಗಾನ, ಕ್ರೀಡೆಗಳಲ್ಲೂ ಮುಂದಿರುವ ಬಹುಮುಖ ಪ್ರತಿಭೆ ಶ್ರೀರಕ್ಷಾ ನೃತ್ಯದ ಎಲ್ಲ ಆಯಾಮಗಳನ್ನು ಅಭ್ಯಾಸ ಮಾಡಿದ್ದಾಳೆ. ಇದೀಗ ಇವಳು ಇದೇ ತಿಂಗಳ 20 ಭಾನುವಾರದಂದು ಜೆ.ಎಸ್.ಎಸ್. ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ವಿದ್ಯುಕ್ತವಾಗಿ ರಂಗಪ್ರವೇಶ ಮಾಡುತ್ತಿದ್ದಾಳೆ. ಈಕೆಯ ಮನಮೋಹಕ ನೃತ್ಯವನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಅದರದ ಸುಸ್ವಾಗತ.
ಉತ್ತಮ ಸಾಂಸ್ಕೃತಿಕ ಹಿನ್ನಲೆಯ ಕುಟುಂಬದಲ್ಲಿ ಜನಿಸಿದ ಶ್ರೀರಕ್ಷಾಳಿಗೆ ಕಲೆ ರಕ್ತಗತವಾಗಿ ಬಳುವಳಿಯಾಗಿ ಬಂದಿರುವಂಥದ್ದು. ತಾಯಿ ಡಾ. ಜಯಶ್ರೀ ನೃತ್ಯಕ್ಷೇತ್ರದ ಸಾಧಕಿ, ತಂದೆ ಡಾ. ರವಿ ಹೆಗ್ಡೆ ಹಿರಿಯ ವಿಜ್ಞಾನಿ, ಹೀಗಾಗಿ ಮನೆಯಲ್ಲಿ ವಿದ್ವತ್ ಪರಿಸರ. ಎರಡುವರ್ಷದ ಮಗು, ಕಿವಿಯ ಮೇಲೆ ಬೀಳುತ್ತಿದ್ದ ಗೆಜ್ಜೆಯುಲಿಗೆ ತನ್ನ ಪುಟ್ಟ ಹೆಜ್ಜೆಗಳನ್ನು ಜೋಡಿಸುತ್ತಿದ್ದ ಆಸಕ್ತಿ-ಪ್ರತಿಭೆಗಳನ್ನು ಗಮನಿಸಿದ ತಾಯಿಯೇ ಆಕೆಯ ಮೊದಲಗುರುವಾದರು. ಬಾಲ್ಯದ ಎರಡರ ಎಳವೆಯಲ್ಲೇ ಶ್ರೀರಕ್ಷಾ ಭರತನಾಟ್ಯ ಕಲಿಯಲಾರಂಭಿಸಿದಳು. ಚುರುಕು ಹುಡುಗಿಯ ಆಸಕ್ತಿ-ಸಾಮರ್ಥ್ಯಕ್ಕೆ ತಕ್ಕಂತೆ ತಾಯಿ ಮತ್ತು ಗುರುವಾದ ಜಯಶ್ರೀ ಅವಳನ್ನು ತಮ್ಮ ನುರಿತ ಗರಡಿಯಲ್ಲಿ ತರಬೇತುಗೊಳಿಸುತ್ತ ಅಂಗಶುದ್ಧ ನರ್ತನದ ಜೊತೆಗೆ ನೃತ್ಯದ ವೈಶಿಷ್ಟ್ಯಗಳನ್ನು ಅವಳ ಮೈಗೂಡಿಸಿದರು. ಭಾರತನಾಟ್ಯದ ಜೊತೆ ಮಾರ್ಗದ 108 ಕರಣಗಳನ್ನು ಕರಗತ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ‘ಡಿಸ್ಟಿಂಕ್ಷನ್’ ಪಡೆದು ಜಯಶಾಲಿಯಾದ ಶ್ರೀರಕ್ಷಾ, ವಿದ್ವತ್ ಹಂತಕ್ಕೆ ತಯಾರಾಗುತ್ತಿರುವುದು ಇವಳ ವಿಶೇಷ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ಪರಿಶ್ರಮ. ಬೆಂಗಳೂರಿನ ನಂದನವನದಲ್ಲಿರುವ ತಮ್ಮ ನೃತ್ಯಸಂಸ್ಥೆ ‘’ಲಯಾಭಿನಯ ಕಲ್ಚುರಲ್ ಫೌಂಡೇಶನ್’ ನೀಡುತ್ತಿರುವ ಶಿಕ್ಷಣದ ಎಲ್ಲ ವಿಭಾಗಗಳಲ್ಲೂ ಅಭ್ಯಾಸ ಮಾಡುತ್ತಿರುವ ಇವಳು, ನೃತ್ಯ, ಯೋಗ, ನೃತ್ಯಸಂಯೋಜನೆ, ಪ್ರದರ್ಶನ, ಕಾರ್ಯಕ್ರಮಗಳ ಸಂಘಟನೆ, ನಿರೂಪಣೆ,ಯಕ್ಷಗಾನದೊಡನೆ , ಪೆನ್ಸಿಲ್ ಸ್ಕೆಚಿಂಗ್, ಏಕಪಾತ್ರಾಭಿನಯ, ಕ್ರೀಡೆ-ಒಲಂಪೈಡ್ಸ್,ಮುಂತಾದವುಗಳಲ್ಲಿ ಉತ್ಸಾಹದಿಂದ ಭಾಗವಹಿಸಿರುವ ಇವಳು ಪುಟ್ಟ ವಯಸ್ಸಿನಿಂದಲೂ ಅನೇಕ ಬಹುಮಾನಗಳನ್ನು ಗಳಿಸಿರುವುದು ಇವಳ ಅಗ್ಗಳಿಕೆ.
ನಾಡಿನಾದ್ಯಂತ ತನ್ನ ಪ್ರತಿಭಾ ಪ್ರದರ್ಶನ ಮಾಡಿರುವ ಈ ಬಹುಮುಖ ಪ್ರತಿಭೆ ಭಾಗವಹಿಸಿರುವ ಬಹುಮಾನಿತ ಪ್ರದರ್ಶನಗಳಲ್ಲಿ ಪ್ರಮುಖವಾದವು- ನೃತ್ಯ ಗಾನ ಸಂಭ್ರಮ ನೃತ್ಯೋತ್ಸವ, ಗಿನ್ನಿಸ್ ರೆಕಾರ್ಡ್ಸ್ ನಲ್ಲಿ ಪ್ರಥಮಸ್ಥಾನ ಪಡೆದ ಕುಚಿಪುಡಿ ತರಂಗೋತ್ಸವ,ಇಸ್ಕಾನ್ ಏರ್ಪಡಿಸಿದ್ದ ಹಾಡು ಮತ್ತು ಏಕಪಾತ್ರಾಭಿನಯದಲ್ಲಿ ಬಹುಮಾನ, ಸ್ಪೆಲ್ ಬೀ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದ ಬಹುಮಾನ, ಗುರುಗಳ ಮಾರ್ಗದರ್ಶನದಲ್ಲಿ ಎಸ್. ವ್ಯಾಸ ಆಯೋಜಿಸಿದ ವಿವಿಧ ಇಂಟರ್ನ್ಯಾಷನಲ್ ಯೋಗ ಸಮ್ಮೇಳನಗಳಲ್ಲಿ ಭಾಗವಹಿಸಿರುವುದಲ್ಲದೆ, ಮೂಕಾಂಬಿಕಾ, ಮಾರಿಕಾಂಬ , ವೆಲ್ಲೂರಿನ ಲಕ್ಷ್ಮಿನಾರಾಯಣೀ ದೇವಾಲಯ, ಕದಂಬೋತ್ಸವ, ಹಂಪಿ ಉತ್ಸವ, ಮೈಸೂರು ದಸರಾ, ನವರಾತ್ರಿ- ಶಿವರಾತ್ರಿ ಮಹೋತ್ಸವ, -ಪುರಂದರ ಮಂಟಪ ನಿಸರ್ಗ-ಬೆಂಗಳೂರು ಮುಂತಾಗಿ ನಾಡಿನಾದ್ಯಂತ ಅನೇಕ ದೇವಾಲಯಗಳಲ್ಲಿ ನೃತ್ಯಪ್ರದರ್ಶನಗಳನ್ನು ನೀಡಿದ ಅನುಭವ. ಪ್ರಸ್ತುತ ಬಿ.ಸಿ.ಎ. ಮೊದಲ ಡಿಗ್ರಿ ತರಗತಿಯಲ್ಲಿ ಓದುತ್ತಿರುವ ಶ್ರೀರಕ್ಷಾ ತನ್ನ ಐದನೆಯ ವಯಸ್ಸಿನಿಂದ ಸತತವಾಗಿ ಅನೇಕ ಬಹುಮಾನಗಳನ್ನು ಪಡೆಯುತ್ತ ಸಾಧನಾ ಪಥದಲ್ಲಿ ಸಾಗುತ್ತಿದ್ದಾಳೆ. ಬಹು ಪ್ರತಿಭಾವಂತೆಯಾದ ಇವಳು ಭರವಸೆಯ ನೃತ್ಯಕಲಾವಿದೆಯಾಗಿ ಹೊರಹೊಮ್ಮುವುದರಲ್ಲಿ ಉತ್ಪ್ರೇಕ್ಷೆಯಿಲ್ಲ.
-ವೈ.ಕೆ.ಸಂಧ್ಯಾ ಶರ್ಮ