ಬಹುಮುಖ ಪ್ರತಿಭೆ ಕು. ಪ್ರತಿಭಾ ನಾಗ್ ರಂಗಪ್ರವೇಶ

0
243

ಹೆಸರಿಗೆ ತಕ್ಕಂತೆ ಅನ್ವರ್ಥನಾಮದ ಪ್ರತಿಭಾ ಬಹು ಪ್ರತಿಭಾವಂತೆ. ‘ಲೀಲಾ ನಾಟ್ಯ ಕಲಾವೃಂದ’ ದ ಸ್ಥಾಪಕಿ-ಹಿರಿಯಗುರು ಲೀಲಾವತಿ ಉಪಾಧ್ಯಾಯ ಅವರಲ್ಲಿ ಪ್ರಥಮ ಹೆಜ್ಜೆಗಳನ್ನು ಕಲಿತು ಅನಂತರ ನಾಟ್ಯಾಚಾರ್ಯ ವಿದ್ವಾನ್. ಟಿ.ಎನ್. ಉದಯಕೃಷ್ಣ ಉಪಾಧ್ಯಾಯ ಅವರ ನುರಿತ ಗರಡಿಯಲ್ಲಿ, ಕಳೆದ ಇಪ್ಪತ್ತು ವರ್ಷಗಳಿಂದ ಸತತ ನೃತ್ಯಭ್ಯಾಸವನ್ನು ಬದ್ಧತೆಯಿಂದ ಮಾಡುತ್ತಿರುವ ವೈಶಿಷ್ಟ್ಯ ಅವಳದು. ಶ್ರೀಮತಿ ರಾಧಿಕಾ ಮತ್ತು ಕೆ.ಜಿ ನಾಗೇಶ್ ಅವರ ಪುತ್ರಿಯಾದ ಇವಳು, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದು, ನೃತ್ಯದಲ್ಲಿ ವಿದ್ವತ್ ಹಂತ ತಲುಪಿದ್ದು ನಾಡಿನಾದ್ಯಂತ ಅನೇಕ ಕಡೆ ತನ್ನ ನೃತ್ಯಪ್ರದರ್ಶನವನ್ನು ನೀಡಿದ್ದಾಳೆ. ಬಹುಮುಖ ಪ್ರತಿಭೆಯಾದ ಈ ಉದಯೋನ್ಮುಖ ಕಲಾವಿದೆ, ಇದೇ ತಿಂಗಳ 18 ಶುಕ್ರವಾರ ಸಂಜೆ 5.30 ಕ್ಕೆ ಜೆ.ಸಿ ರಸ್ತೆಯಲ್ಲಿರುವ ಎ.ಡಿ.ಎ.ರಂಗಮಂದಿರದಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಲಿದ್ದಾಳೆ. ಅವಳ ನೃತ್ಯದ ಸೊಬಗನ್ನು ವೀಕ್ಷಿಸಲು ಎಲ್ಲ ಕಲಾರಸಿಕರಿಗೂ ಆದರದ ಸುಸ್ವಾಗತ.


ನೃತ್ಯ ಪ್ರತಿಭಾಳ ಬಾಲ್ಯದ ಒಲವು. ಮಗಳಲ್ಲಿರುವ ಆಸಕ್ತಿಯನ್ನು ಗಮನಿಸಿದ ಪೋಷಕರು ಅವಳನ್ನು ಏಳನೆಯ ವಯಸ್ಸಿನಲ್ಲಿ ‘ಲೀಲಾ ನಾಟ್ಯ ಕಲಾವೃಂದ’ ದ ಹಿರಿಯಗುರು ಲೀಲಾವತಿ ಉಪಾಧ್ಯಾಯ ಅವರಲ್ಲಿ ಭರತನಾಟ್ಯ ಕಲಿಯಲು ಸೇರಿಸಿದರು. ಅವರ ಮಾರ್ಗದರ್ಶನದಲ್ಲಿ ಪ್ರತಿಭಾ, ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್ ನೃತ್ಯಪರೀಕ್ಷೆಯನ್ನು ಅತ್ಯುಚ್ಚ ಅಂಕಗಳಿಂದ ಪಾಸು ಮಾಡಿದಳು. ಅನಂತರ ಅವಳು, ಲೀಲಾವತಿಯವರ ಪುತ್ರ ಉದಯಕೃಷ್ಣ ಉಪಾಧ್ಯಾಯ ಅವರ ಗರಡಿಗೆ ಸೇರ್ಪಡೆಗೊಂಡಳು. ಉತ್ತಮ ರೀತಿಯಲ್ಲಿ ನಾಟ್ಯಶಿಕ್ಷಣ ನಡೆದು, ಕರ್ನಾಟಕ ಸರ್ಕಾರದ ಸೀನಿಯರ್ ಮತ್ತು ವಿದ್ವತ್ ಪೂರ್ವ ನೃತ್ಯಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ಜಯಶೀಲಳಾದಳು. ಜೊತೆಯಲ್ಲಿ ಗುರು ಸೀತಾಲಕ್ಷ್ಮೀಯವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದಾಳೆ. ಇದರೊಡನೆ ಪಂದನಲ್ಲೂರು ಶೈಲಿಯಲ್ಲಿ ಗುರು ಯಾಮಿನಿ ಮುತ್ತಣ್ಣ ಅವರಲ್ಲಿ ಭರತನಾಟ್ಯವನ್ನು ಕಲಿಯುವ ಅದೃಷ್ಟ ಅವಳದಾಗಿತ್ತು. ಅಷ್ಟೇ ಅಲ್ಲದೆ, ಚೈತನ್ಯ ವೆಲ್ ನೆಸ್ ಇನ್ಸ್ಟಿಟ್ಯೂಟ್ ನಲ್ಲಿ ಮೂರುವರ್ಷಗಳ ಕಾಲ ‘ವಿನ್ಯಾಸ ಯೋಗ’ದಲ್ಲಿ ತರಬೇತಿಗೊಳ್ಳುವ ಅವಕಾಶ ಅವಳಿಗೊದಗಿತ್ತು.
ಪ್ರತಿಭಾ, ಶಾಲಾ-ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂದು. ಓದಿನಲ್ಲೂ ಜಾಣೆ. ಓದಿದ ಎ. ಎಸ್. ಸಿ. ಪಬ್ಲಿಕ್ ಸ್ಕೂಲ್ ನಲ್ಲಿ ಸಾಂಸ್ಕೃತಿಕ ಕ್ಯಾಪ್ಟನ್ ಆಗಿ ಸಕ್ರಿಯಳಾಗಿದ್ದಳು. ಹತ್ತನೆಯ ತರಗತಿಯಲ್ಲಿ ಇಡೀ ಶಾಲೆಗೆ ಟಾಪರ್ ಆದ ಅಗ್ಗಳಿಕೆ. ಮುಂದೆ-ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಸೈನ್ಸ್ ಡಿಪಾರ್ಟ್ಮೆಂಟ್ ನಲ್ಲಿ ಪ್ರೆಸಿಡೆಂಟ್ ಆಗಿ, ನೃತ್ಯತಂಡದ ವೈಸ್ ಪ್ರೆಸಿಡೆಂಟ್ ಆಗಿ ತನ್ನ ಚಟುವಟಿಕೆ ಮುಂದುವರಿಸಿದ ಪ್ರತಿಭಾ, ಅನಂತರ- ಎಂ. ವಿ. ಜೆ ಇಂಜಿನಿಯರಿಂಗ್ ಕಾಲೇಜಿನಿಂದ ಯಶಸ್ವೀ ಇಂಜಿನಿಯರ್ ಆಗಿ ಹೊರಹೊಮ್ಮಿದ್ದು ಅವಳ ವೈಶಿಷ್ಟ್ಯ. ವಿದ್ಯಾಭ್ಯಾಸದ ಆಸಕ್ತಿಯ ಜೊತೆ ಅವಳಲ್ಲಿ ನಾಯಕತ್ವದ ಗುಣ ಕೂಡ ಚಿಕ್ಕಂದಿನಿಂದಲೇ ಮನೆಮಾಡಿತ್ತು ಎಂದರೆ ಅತಿಶಯೋಕ್ತಿಯಲ್ಲ.


ನಾಡಿನಾದ್ಯಂತ ಎಲ್ಲ ದೇವಾಲಯಗಳಲ್ಲಿ ಮತ್ತು ನೃತ್ಯೋತ್ಸವಗಳಲ್ಲಿ ನೃತ್ಯಪ್ರದರ್ಶನಗಳನ್ನು ನೀಡಿರುವ ಪ್ರತಿಭಾಳ ಇತರ ಹವ್ಯಾಸಗಳೆಂದರೆ- ಅಡುಗೆ, ತೋಟಗಾರಿಕೆ, ಪುಸ್ತಕಗಳನ್ನು ಓದುವುದು ಇತ್ಯಾದಿ. ಪ್ರಸ್ತುತ ಸಾಫ್ಟವೇರ್ ಇಂಜಿನಿಯರಾಗಿ ಕೆಲಸ ಮಾಡುತ್ತಿರುವ ಇವಳ ಪ್ರಥಮ ಒಲವು ನೃತ್ಯವೇ. ಹೀಗಾಗಿ ನೃತ್ಯಕ್ಷೇತ್ರದಲ್ಲಿ ಸಾಧನೆ ಮಾಡುವ ಆಕಾಂಕ್ಷೆಯನ್ನು ಪ್ರತಿಭಾ ಹೊಂದಿದ್ದಾಳೆ.
-ವೈ.ಕೆ.ಸಂಧ್ಯಾ ಶರ್ಮ