ಪುಟ್ಟಮಕ್ಕಳಿಂದ ಹಿಡಿದು ನಿಪುಣತೆ ಪಡೆದ ಹಿರಿಯ ನೃತ್ಯ ಕಲಾವಿದರವರೆಗೂ ಅವರ ನೃತ್ಯದ ಹೆಜ್ಜೆಗಳಿಗೆ ಅನುವು ಮಾಡಿಕೊಟ್ಟ, ಪ್ರೋತ್ಸಾಹದ ಸಿಂಚನದೊಂದಿಗೆ ಅವರ ಬೆಳವಣಿಗೆಗೆ ಇಂಬು ನೀಡಿದ ‘ಸಾಧನ ಸಂಗಮ’ ದ 37 ನೇ ವಾರ್ಷಿಕೋತ್ಸವದ ಸುಂದರ ಕಾರ್ಯಕ್ರಮವು ಇತ್ತೀಚೆಗೆ ಕೆ.ಇ.ಎ. ಪ್ರಭಾತ್ ರಂಗಮಂದಿರದಲ್ಲಿ ವರ್ಣರಂಜಿತವಾಗಿ ನಡೆಯಿತು.
ಬೆಳಗಿನ ಮುದವಾದ ವಾತಾವರಣದಲ್ಲಿ ರಂಗದ ಮೇಲೆ ಮುದ್ದಾದ ಹಕ್ಕಿಗಳ ಚಿಲಿಪಿ. ಬಣ್ಣಬಣ್ಣದ ವಸ್ತ್ರಾಲಂಕಾರದಲ್ಲಿ, ಉದ್ದನೆಯ ಕುಚ್ಚಿನ ಹೆರಳು, ಮಲ್ಲಿಗೆಯ ಮುಡಿಯಲ್ಲಿ ಉದಯೋನ್ಮುಖ ನೃತ್ಯವಿದ್ಯಾರ್ಥಿಗಳು ಪರಮೋತ್ಸಾಹದಿಂದ ಗೆಜ್ಜೆ ಕಟ್ಟಿ ನರ್ತಿಸಿದ ದೃಶ್ಯವನ್ನು ನೋಡಬೇಕಿತ್ತು. ಅಲ್ಲಿ ನೃತ್ಯದ ಶಾಸ್ತ್ರಕ್ಕೆ ದುರ್ಬೀನು ಹಚ್ಚಿ ನೋಡುವ ಅಗತ್ಯವಿರಲಿಲ್ಲ. ಮಕ್ಕಳ ಪರಿಶ್ರಮದ ನೃತ್ಯಾಭ್ಯಾಸ, ಗೆಜ್ಜೆಗಳ ಲಯಬದ್ಧ ದನಿ, ಸುಂದರ ಆಂಗಿಕಾಭಿನಯ, ಅಭಿನಯದ ವೈಖರಿ ಕಣ್ಮನ ತುಂಬಿತು. ಕಡೆಯಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ವಿದುಷಿ ಜ್ಯೋತಿ ಪಟ್ಟಾಭಿರಾಮ್ ನಿರ್ದೇಶನದಲ್ಲಿ ಸುಮನೋಹರವಾಗಿ ಮೂಡಿಬಂದ ದಿ. ದೇವುಡು ನರಸಿಂಹ ಶಾಸ್ತ್ರಿಯವರ ಮಹೋನ್ನತ ಕೃತಿ ‘ಮಹಾಬ್ರಾಹ್ಮಣ’ವನ್ನು ಆಧರಿಸಿದ ‘ವಿಶ್ವಾಮಿತ್ರ- ಗಾಯತ್ರಿ’ ನೃತ್ಯರೂಪಕ, ನಾಟಕೀಯ ಸೆಳಮಿಂಚಿನ ದೃಶ್ಯಗಳಿಂದೊಡಗೂಡಿ ಆಕರ್ಷಕವಾಗಿತ್ತು.
ಇದೇ ಸಮಾರಂಭದಲ್ಲಿ ಹುಬ್ಬಳ್ಳಿಯ ನಾಟ್ಯಾಂಜಲಿ ನೃತ್ಯ ಕಲಾಕೇಂದ್ರದ ಶ್ರೀ ಪ್ರದೀಪ್ ಭಟ್ ಮತ್ತು ಡಾ. ಸಹನಾ ಭಟ್ ಅವರಿಗೆ ‘ಸಾಧನಾ ಕಲಾತ್ಮಿಕಾ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ‘ಸಾಧನ ಸಂಗಮ’ದ ನಿರ್ದೇಶಕಿ-ನೃತ್ಯಗುರು ಜ್ಯೋತಿ ಪಟ್ಟಾಭಿರಾಂ, ನೃತ್ಯ ಕಲಾವಿದೆ ಡಾ. ಸಾಧನಶ್ರೀ ಮತ್ತು ಲೇಖಕಿ ವೈ.ಕೆ.ಸಂಧ್ಯಾ ಶರ್ಮ ಉಪಸ್ಥಿತರಿದ್ದರು.