ʻಆರ್ಥಿಕ ಸಮೀಕ್ಷೆ-2022-23ʼರ ಪ್ರಕಾರ, ದೇಶದ ಜನಸಂಖ್ಯೆಯ ಸುಮಾರು 65% ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಜನಸಂಖ್ಯೆಯ 47% ಜನರು ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಕೃಷಿಯು ನಿರ್ದಿಷ್ಟ ಕಾಲಮಿತಿಗೆ ಸೀಮಿತವಾದ ಚಟುವಟಿಕೆ. ಕೃಷಿಯ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸೂಕ್ತ ಸಮಯದಲ್ಲಿ ಸೂಕ್ತ ಕೃಷಿ ಕಚ್ಚಾ ವಸ್ತುಗಳ (ಇನ್ಪುಟ್) ಬಳಕೆ ಅಗತ್ಯವಿರುತ್ತದೆ. ಕೃಷಿ-ಕಚ್ಚಾ ವಸ್ತುಗಳು ಕೃಷಿಯ ಅತ್ಯಗತ್ಯ ಅಂಶಗಳಾಗಿವೆ. ಕೃಷಿ-ಕಚ್ಚಾವಸ್ತುಗಳು ಮತ್ತು ಸೇವೆಗಳ ಪರಿಣಾಮಕಾರಿ ವಿತರಣಾ ವ್ಯವಸ್ಥೆಯು ಕೃಷಿ ಆದಾಯದ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
ಭಾರತದಲ್ಲಿ, ಕೃಷಿ ಕಚ್ಚಾವಸ್ತುಗಳ ಸೇವೆಗಳ ಜಾಲವು ಛಿದ್ರಗೊಂಡಿದೆ. ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಕೃಷಿ ಉಪಕರಣಗಳಿಗಾಗಿ ಪ್ರತ್ಯೇಕ ಡೀಲರ್ ಜಾಲಗಳಿವೆ. ಇದಲ್ಲದೆ, ಮಣ್ಣು, ಬೀಜ, ರಸಗೊಬ್ಬರಗಳ ಪರೀಕ್ಷೆಯ ಅಗತ್ಯತೆ ಮತ್ತು ವಿವಿಧ ರೈತ ಆಧಾರಿತ ಯೋಜನೆಗಳ ಬಗ್ಗೆ ಮಾಹಿತಿಯು ರೈತರನ್ನು ತಲುಪುವುದರಲ್ಲೂ ಸಮಸ್ಯೆಯಿದೆ. ವಿವಿಧ ಏಜೆನ್ಸಿಗಳ ಮೂಲಕ ಬಿಡಿಬಿಡಿಯಾಗಿ ಈ ಮಾಹಿತಿ ರೈತರಿಗೆ ತಲುಪುತ್ತದೆ. ಈ ವಿಧಾನವು ಮಾಹಿತಿಯುಕ್ತ ನಿರ್ಧಾರಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ತಂತ್ರಜ್ಞಾನ ಆಧಾರಿತ ಸಮಗ್ರ ಮಾಹಿತಿಯನ್ನು ರೈತರಿಗೆ ಒದಗಿಸಲು ವಿಫಲವಾಗಿದೆ.
ರೈತರು ವಿಶ್ವಾಸ ಹೊಂದಿರುವ ಸರ್ಕಾರದ ಬೆಂಬಲದೊಂದಿಗೆ, ಒಂದೇ ಸೂರಿನಡಿ ರೈತರಿಗೆ ಸಮಗ್ರ ಪರಿಹಾರವನ್ನು ಒದಗಿಸುವುದರಲ್ಲಿ ಈ ಸಮಸ್ಯೆಗೆ ಪರಿಷ್ಕಾರ ಅಡಗಿದೆ. ಈ ಹಿಂದೆ, ಖಾಸಗಿ ವಲಯವು ರೈತರ ಕಚ್ಚಾವಸ್ತು ಮತ್ತು ಸೇವೆಗಳಿಗಾಗಿ ಇಂತಹ ಒಂದೇ ಸೂರಿನಡಿಯ ಕೇಂದ್ರಗಳ ಮಾದರಿಯನ್ನು ಪುನರಾವರ್ತಿಸಲು ಪ್ರಯತ್ನಿಸಿದೆ. ಆದರೆ ಹೆಚ್ಚು ಕಡಿಮೆ ಅಂತಹ ಪ್ರಯತ್ನಗಳು ವಿಫಲವಾಗಿವೆ.
ಹೀಗಾಗಿ, ರೈತರು ಹೆಚ್ಚಾಗಿ ಭೇಟಿ ನೀಡುವ ಹಾಲಿ ರಸಗೊಬ್ಬರ ಚಿಲ್ಲರೆ ಅಂಗಡಿಗಳನ್ನೇ ʻಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರʼ (ಪಿಎಂಕೆಎಸ್ಕೆ)ಗಳಾಗಿ ಪರಿವರ್ತಿಸುವ ಆಲೋಚನೆಯು ರೈತರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಒಂದು ಸುಸ್ಥಿರ ಮತ್ತು ದೀರ್ಘಕಾಲೀನ ಪರಿಹಾರವೆನಿಸಿದೆ. ಮೋದಿ ಸರ್ಕಾರ ಪ್ರಾರಂಭಿಸಿದ ಈ ಕಾರ್ಯಕ್ರಮವು ದೇಶದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಪರಿವರ್ತನೆಯನ್ನು ತಂದಿದೆ. ರೈತರನ್ನು ಸಬಲೀಕರಣಗೊಳಿಸುವ ಮತ್ತು ಕೃಷಿ ಬೆಳವಣಿಗೆಯನ್ನು ಹೆಚ್ಚಿಸುವ ಆಶಯದೊಂದಿಗೆ ರೂಪಿಸಲಾದ ಈ ಪ್ರವರ್ತಕ ಉಪಕ್ರಮವು ಕೃಷಿ ಕಚ್ಚಾವಸ್ತುಗಳು, ಮಾಹಿತಿ ಹಾಗೂ ಸೇವೆಗಳ ಲಭ್ಯತೆಯನ್ನು ಸರಳೀಕರಿಸುವ, ರೈತರ ಜೀವನವನ್ನು ಉನ್ನತೀಕರಿಸುವ ಮತ್ತು ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ.
ʻಪಿಎಂಕೆಎಸ್ಕೆʼ ಉಪಕ್ರಮದ ಅಡಿಯಲ್ಲಿ, ಸುಮಾರು 2,80,000 ಸಕ್ರಿಯ ಚಿಲ್ಲರೆ ರಸಗೊಬ್ಬರ ಅಂಗಡಿಗಳನ್ನು ಹಂತಹಂತವಾಗಿ ರೈತರಿಗೆ ಸಮಗ್ರ ಒಂದೇ ಸೂರಿನಡಿಯ ಮಳಿಗೆಗಳಾಗಿ ಪರಿವರ್ತಿಸಲಾಗುತ್ತಿದೆ. ʻಪಿಎಂಕೆಎಸ್ಕೆʼ ಉಪಕ್ರಮವು ರಸಗೊಬ್ಬರಗಳು, ಬೀಜಗಳು ಮತ್ತು ಕೀಟನಾಶಕಗಳು, ಸಣ್ಣ ಕೃಷಿ ಯಂತ್ರೋಪಕರಣಗಳು / ಸಲಕರಣೆಗಳು ಹಾಗೂ ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಸಿಂಪಡಿಸಲು ಡ್ರೋನ್ ಸೇವೆ ಸೇರಿದಂತೆ ಎಲ್ಲಾ ಅಗತ್ಯಗಳನ್ನು ಅನುಕೂಲಕರ ರೀತಿಯಲ್ಲಿ ರೈತರಿಗೆ ಒದಗಿಸುವತ್ತ ಗಮನ ಹರಿಸುತ್ತದೆ. ʻಪಿಎಂಕೆಎಸ್ಕೆʼ ಉಪಕ್ರಮದ ಪ್ರಮುಖ ಅಂಶವೆಂದರೆ ಮಣ್ಣು ಮತ್ತು ಬೀಜ ಪರೀಕ್ಷಾ ಸೌಲಭ್ಯವನ್ನು ಒದಗಿಸುವುದು. ರೈತರಿಗೆ ಅವರ ಹೊಲದ ನಿರ್ದಿಷ್ಟ ಮಣ್ಣು ಮತ್ತು ಬೆಳೆ ಪರಿಸ್ಥಿತಿಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಈ ಕೇಂದ್ರಗಳು ಮಾಹಿತಿಯುಕ್ತ ನಿರ್ಧಾರ, ಅತ್ಯುತ್ತಮ ಸಂಪನ್ಮೂಲಗಳ ಬಳಕೆ ಹಾಗೂ ಹೆಚ್ಚಿನ ಇಳುವರಿಯನ್ನು ಸಾಧ್ಯವಾಗಿಸುತ್ತವೆ. ಇದು ನಿಖರ ಕೃಷಿ ಮತ್ತು ಸಂಪನ್ಮೂಲ-ದಕ್ಷ ಕೃಷಿ ಪದ್ಧತಿಗಳನ್ನು ಉತ್ತೇಜಿಸುತ್ತದೆ. ಇದಲ್ಲದೆ, ʻಪಿಎಂಕೆಎಸ್ಕೆʼಗಳು ಜ್ಞಾನ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಬೆಳೆಗಳು ಮತ್ತು ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪ್ರಸಾರ ಮಾಡುತ್ತವೆ. ಮಾಹಿತಿಯ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ಈ ಕೇಂದ್ರಗಳು ರೈತರಿಗೆ ಮಾಹಿತಿಯುಕ್ತ ಆಯ್ಕೆಗಳನ್ನು ಮಾಡಲು ಅಧಿಕಾರ ನೀಡುತ್ತವೆ, ಆ ಮೂಲಕ ಅವರ ದಕ್ಷತೆ ಮತ್ತು ಆದಾಯವನ್ನು ಹೆಚ್ಚಿಸುತ್ತವೆ.
ಲಕ್ಷಾಂತರ ರೈತರ ಜೀವನವನ್ನು ಸರಳಗೊಳಿಸುವುದು ಇದರ ಉದ್ದೇಶವಾಗಿದೆ. ಈ ಉಪಕ್ರಮವು ಉತ್ತಮ ಕೃಷಿ ಉತ್ಪಾದಕತೆ ಮತ್ತು ಕೃಷಿ ಸಮುದಾಯದ ಒಟ್ಟಾರೆ ಸಮೃದ್ಧಿಯನ್ನು ಖಚಿತಪಡಿಸುತ್ತದೆ.
ಇತ್ತೀಚಿನ ಬೆಳವಣಿಗೆಗಳು ʻಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರʼ ಉಪಕ್ರಮದ ಯಶಸ್ಸನ್ನು ಬಿಂಬಿಸುತ್ತವೆ. ಜುಲೈ 27, 2023 ರಂದು ರಾಜಸ್ಥಾನದ ಸಿಕಾರ್ನಲ್ಲಿ ನಡೆದ ‘ಪಿಎಂ-ಕಿಸಾನ್ ಸಮ್ಮೇಳನ್’ ಎಂಬ ಮಹತ್ವದ ಕಾರ್ಯಕ್ರಮದಲ್ಲಿ, ಗೌರವಾನ್ವಿತ ಪ್ರಧಾನಿಯವರು 1,25,000 ʻಪಿಎಂಕೆಎಸ್ಕೆʼಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ದೇಶಾದ್ಯಂತ ಸುಮಾರು 2 ಕೋಟಿ ರೈತರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಇದು ಈ ಉಪಕ್ರಮಕ್ಕೆ ಅಂತಿಮ ಬಳಕೆದಾರರ ಸಕಾರಾತ್ಮಕ ಸ್ಪಂದನೆಯನ್ನು ತೋರಿಸುತ್ತದೆ.
ಈ ಉಪಕ್ರಮದ ಯಶಸ್ಸನ್ನು ವಿವಿಧ ಮಧ್ಯಸ್ಥಗಾರರಲ್ಲಿ ಮೂಡಿರುವ ಏಕತೆ ಮತ್ತು ಹೆಮ್ಮೆಯ ಭಾವನೆಯಿಂದ ಅಳೆಯಬಹುದು. ಇತ್ತೀಚಿನ ಸಮೀಕ್ಷೆಯು ಈಗಾಗಲೇ ಈ ಕೇಂದ್ರಗಳಿಗೆ ಭೇಟಿ ನೀಡುವ ರೈತರ ಸಂಖ್ಯೆಯಲ್ಲಿ 15-20% ಹೆಚ್ಚಳವಾಗಿದೆ ಎಂದು ಸೂಚಿಸಿದೆ. ʻಪಿಎಂಕೆಎಸ್ಕೆʼಯ ವಾತಾವರಣದಿಂದ ಹಿಡಿದು ಈ ಕೇಂದ್ರಗಳಲ್ಲಿ ಲಭ್ಯವಿರುವ ಸೌಲಭ್ಯಗಳು ಮತ್ತು ಉಪಕರಣಗಳವರೆಗೆ ಒಟ್ಟಾರೆ ಪರಿವರ್ತನೆಯಿಂದ ರೈತರು ಸಂತಸಗೊಂಡಿರುವುದು ಕಂಡು ಬಂದಿದೆ. ಈ ʻಪಿಎಂಕೆಎಸ್ಕೆʼಗಳ ಮೂಲಕ ʻನ್ಯಾನೋ ಯೂರಿಯಾʼ ಮಾರಾಟವೂ 6 ಕೋಟಿ ತಲುಪಿದೆ. ರಸಗೊಬ್ಬರ ಕಂಪನಿಗಳಿಂದ ಬೆಂಬಲ ಪಡೆದಿರುವ ಡ್ರೋನ್ ಉದ್ಯಮಿಗಳು, ರಸಗೊಬ್ಬರಗಳು ಮತ್ತು ರಾಸಾಯನಿಕಗಳನ್ನು ಉತ್ತಮ ರೀತಿಯಲ್ಲಿ ಸಿಂಪಡಿಸುವುದನ್ನು ಉತ್ತೇಜಿಸಲು ʻಪಿಎಂಕೆಎಸ್ಕೆʼಗಳೊಂದಿಗೆ ನಿಧಾನವಾಗಿ ಸಹಯೋಗ ಏರ್ಪಡಿಸಿಕೊಳ್ಳುತ್ತಿದ್ದಾರೆ. ರಾಜ್ಯಗಳು, ʻಕೆವಿಕೆʼಗಳು, ವಿತರಕರ ನಡುವೆ ಹೆಚ್ಚಿದ ಒಡನಾಟವು ರೈತರಿಗೆ ಜ್ಞಾನ ಮತ್ತು ಸೇವೆಗಳನ್ನು ಸಕಾರಾತ್ಮಕ ರೀತಿಯಲ್ಲಿ ಯಶಸ್ವಿಯಾಗಿ ತಲುಪಿಸಲು ನೆರವಾಗುತ್ತಿದೆ.
ʻಪಿಎಂಕೆಎಸ್ಕೆʼ ಉಪಕ್ರಮವು ರೈತರನ್ನು ಸಬಲೀಕರಣಗೊಳಿಸುವಲ್ಲಿ ಮತ್ತು ರಾಷ್ಟ್ರದ ಆರ್ಥಿಕತೆಯ ಬೆನ್ನೆಲುಬನ್ನು ಬಲಪಡಿಸುವಲ್ಲಿ ಕ್ರಾಂತಿಕಾರಿ ಎಂದು ಸಾಬೀತಾಗಿದೆ. ಕೃಷಿ ಕಚ್ಚಾವಸ್ತು ಮತ್ತು ಜ್ಞಾನದ ಲಭ್ಯತೆಯನ್ನು ಸರಳಗೊಳಿಸುವ ಮೂಲಕ, ಆಧುನಿಕ ತಂತ್ರಜ್ಞಾನಗಳೊಂದಿಗೆ ರೈತರನ್ನು ಸಬಲೀಕರಣಗೊಳಿಸುವ ಮೂಲಕ ಮತ್ತು ಸುಸ್ಥಿರ ಅಭ್ಯಾಸಗಳನ್ನು ಬೆಳೆಸುವ ಮೂಲಕ, ʻಪಿಎಂಕೆಎಸ್ಕೆʼಗಳು ಕೃಷಿ ಸಮುದಾಯಕ್ಕೆ ಸಮೃದ್ಧಿಯ ಹೊಸ ಬಾಗಿಲು ತೆರೆದಿವೆ. ಸರ್ಕಾರದ ಅಚಲ ಬೆಂಬಲ ಮತ್ತು ಮಧ್ಯಸ್ಥಗಾರರ ಸಾಮೂಹಿಕ ಪ್ರಯತ್ನಗಳೊಂದಿಗೆ, ʻಪಿಎಂಕೆಎಸ್ಕೆʼಗಳು ಸಕಾರಾತ್ಮಕ ಬದಲಾವಣೆಯನ್ನು ಮುಂದುವರಿಸುತ್ತವೆ. ರಾಷ್ಟ್ರದ ಬೆನ್ನೆಲುಬಾದ ಕೃಷಿಯನ್ನು ಬಲಪಡಿಸುತ್ತವೆ, ಅಭಿವೃದ್ಧಿ ಹೊಂದುತ್ತಿರುವ ಮತ್ತು ಸ್ವಾವಲಂಬಿ ಕೃಷಿ ಪರಿಸರ ವ್ಯವಸ್ಥೆಗೆ ಕೊಡುಗೆ ನೀಡುತ್ತವೆ.
– ಡಾ. ಮನ್ಸುಖ್ ಮಾಂಡವಿಯಾ,
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು
***