ತಿಪಟೂರು: ತೆಂಗು ನುಸಿ ಪೀಡೆ, ಕಾಂಡ ಕೊರೆತ, ಅತಿವೃಷ್ಠಿ, ಅನಾವೃಷ್ಠಿಗಳಿಂದ ಇಳುವರಿ ಕುಂಠಿತವಾಗಿದ್ದು ಪಾತಾಳ ಮುಟ್ಟಿರುವ ಕೊಬ್ಬರಿ ಬೆಲೆಗೆ ಸರಕಾರದಿಂದ ಉತ್ತಮ ಬೆಲೆಗೆ ಆಗ್ರಹಿಸಿ ಬಹಳ ದಿನದಿಂದಲೂ ಬೇಡಿಕೆ ಇಟ್ಟಿದ್ದರೂ ಸರಕಾರದಿಂದ ಸ್ಪಂದನೆ ವ್ಯಕ್ತವಾಗದ ಕಾರಣ ಆ೧೦ ಗುರುವಾರ ತಿಪಟೂರು ಬಂದ್‌ಗೆ ರಾಜ್ಯ ರೈತ ಸಂಘ ಕೋಡಿಹಳ್ಳಿ ಚಂದ್ರಶೇಖರ್ ಬಣ ಹಾಗೂ ಹಸಿರು ಸೇನೆ ಕರೆ ನೀಡಿದೆ.
ನಗರದ ಎಪಿಎಂಸಿ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರೈತ ಸಂಘದ ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಚುನಾವಣೆಗೆ ಮೊದಲು ಕಾಂಗ್ರೆಸ್ ಪಕ್ಷ ೧೫ಸಾವಿರ ಬೆಲೆ ನೀಡುವುದಾಗಿ ಆಶ್ವಾಸನೆ ನೀಡಿತ್ತು. ಆದರೆ ಈಗ ಕೇವಲ ೧೨೫೦ರೂ ಪ್ರೋತ್ಸಾಹ ಧನ ಘೋಷಿಸಿದೆ. ಆದರೂ ಕೊಬ್ಬರಿ ಬೆಲೆ ೧೦ ಸಾವಿರವನ್ನೂ ದಾಟಿಲ್ಲ. ಮೊದಲೇ ತೆಂಗು ನುಸಿ ಪೀಡೆ, ಕಾಂಡ ಕೊರೆತ, ಅತಿವೃಷ್ಠಿ, ಅನಾವೃಷ್ಠಿಗಳಿಂದ ಇಳುವರಿ ಕುಂಠಿತವಾಗಿದೆ. ಈಗ ಬೆಲೆಯೂ ಇಲ್ಲದಿದ್ದರೆ ರೈತನ ಪಾಡೇನು ಎಂದು ಪ್ರಶ್ನಿಸಿದರು.
ಗುರುವಾರ ತಿಪಟೂರು ಬಂದ್‌ಗೆ ಹಲವಾರು ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದು ಬೆಳಿಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಬಂದ್ ಕರೆ ನೀಡಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.
ಅದಾಗ್ಯೂ ಸರಕಾರ ಕೊಬ್ಬರಿ ಬೆಲೆ ಹೆಚ್ಚಿಸಲು ಕ್ರಮ ಕೈಗೊಳ್ಳದಿದ್ದರೆ ಇದೇ ತಿಂಗಳು ೨೨ನೇ ತಾರೀಖಿನ ನಂತರ ಬೆಂಗಳೂರಿಗೆ ರೈತರು ಪಾದಯಾತ್ರೆ ಮೂಲಕ ತೆರಳಿ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಇದರಲ್ಲಿ ರಾಜ್ಯದಾದ್ಯಂತ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಹಸಿರು ಸೇನೆ ಅಧ್ಯಕ್ಷ ಯೋಗಾನಂದಸ್ವಾಮಿ ಮಾತನಾಡಿ ಕೊಬ್ಬರಿಗೆ ಕನಿಷ್ಠ ೨೫ಸಾವಿರ ರೂ ಬೆಲೆ ಸಿಗುವ ಹಾಗೆ ಮಾಡಿ. ರೈತರು ಸಮಾಧಾನವಾಗಿದ್ದಾರೆ ಏನೂ ತೊಂದರೆ ಇಲ್ಲ ಎಂದು ಸರಕಾರ ತಿಳಿದುಕೊಂಡಿದ್ದರೆ ಅದು ತಪ್ಪು. ರೈತರು ರೊಚ್ಚಿಗೆದ್ದರೆ ಮುಂದಿನ ಎಲ್ಲ ಪರಿಣಾಮಗಳಿಗೆ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ತಿಳಿಸಿದರು.
ಸಂಚಾಲಕ ಗೋಪಾಲ್, ಕಾರ್ಯದರ್ಶಿ ಶ್ವೇತಕುಮಾರ್ ಹೆಚ್.ಜಿ. ಹಾಗೂ ರಜಿತ್ ಉಪಸ್ಥಿತರಿದ್ದರು