ಬೆಂಗಳೂರು ಗ್ರಾಮಾಂತರ: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ನಿಯಮಿತವಾಗಿ ನೀಡಲಾಗುವ ಬಾಲಕ್ಷಯರೋಗದ ವಿರುದ್ಧ ಬಿಸಿಜಿ, ಪೋಲಿಯೋ ಕಾಯಿಲೆ ತಡೆಗಟ್ಟಲು ಓಪಿವಿ ಮತ್ತು ಐ.ಪಿ.ವಿ ಲಸಿಕೆ, ಪಿತ್ತಜನಕಾಂಗದ ಸೋಂಕನ್ನು ತಡೆಗಟ್ಟಲು ಹೆಪಟೈಟಿಸ್ ಬಿ, ಅತಸಾರ ಬೇದಿ ತಡೆಗಟ್ಟಲು ರೋಟಾ, ನಿಮೋಕಾಕಲ್ ಕಾಯಿಲೆ ತಡೆಗಟ್ಟಲು ಪಿಸಿವಿ, ಗಂಟಲು ಮಾರಿ ತಡೆಗೆ , ನಾಯಿ ಕೆಮ್ಮು, ಧನುರ್ವಾಯು, ಇನ್‌ಫ್ಲುಯೆಂಜಾ ಬಿ, ಮತ್ತು ಹೆಪಟೈಟಿಸ್ ಬಿ, ಕಾಯಿಲೆ ತಡೆಗಟ್ಟಲು ಪೆಂಟಾವಾಲೆಂಟ್, ಇರುಳು ಕುರುಡುತನ ತಡೆಗಟ್ಟಲು ವಿಟಮಿನ್ ಎ, ದಡಾರ-ರುಬೆಲ್ಲಾ , ಟಿ.ಡಿ. ಲಸಿಕೆಗಳ ಲಸಿಕಾಕರಣದ ಪ್ರಗತಿಯನ್ನು ಹೆಚ್ಚಿಸುವ ಸಲುವಾಗಿ ಜಿಲ್ಲೆಯಾದ್ಯಂತ ಮೂರು ಸುತ್ತುಗಳಲ್ಲಿ ಪರಿಣಾಮಕಾರಿ ಮಿಷನ್ ಇಂದ್ರಧನುಷ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಜೇಂದ್ರ ಹಾಗೂ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಸೀಮಾ ಮಾಬಾಳೆ ತಿಳಿಸಿದ್ದಾರೆ.
ಈ ಕುರಿತು ಜಂಟಿ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಆಗಸ್ಟ್ 7 ರಿಂದ 12 ರವರೆಗೆ ಮೊದಲನೇ ಸುತ್ತು, ಸೆಪ್ಟೆಂಬರ್ 11 ರಿಂದ 16 ರವರೆಗೆ ಎರಡನೇ ಸುತ್ತು ಹಾಗೂ ಅಕ್ಟೋಬರ್ 9 ರಿಂದ 14 ರವರೆಗೆ ಮೂರನೇ ಸುತ್ತಿನ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಈ ಮೂರು ಸುತ್ತುಗಳಲ್ಲಿ ನಿಗದಿತ ದಿನಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಲಸಿಕೆಯಿಂದ ವಂಚಿತರಾದ ಗರ್ಭಿಣಿ ಮಹಿಳೆಯರು ಮತ್ತು 0-5 ವರ್ಷದ ಮಕ್ಕಳನ್ನು U-WIN ಪೋರ್ಟಲ್ ಮೂಲಕ ನೊಂದಾಯಿಸಿಕೊಂಡು ಲಸಿಕಾಕರಣ ನಡೆಸಲಾಗುವುದು.
ಜಿಲ್ಲೆಯ ಎಲ್ಲಾ ಸಾರ್ವಜನಿಕರು ತಮ್ಮ ಸಮೀಪದ ಅಂಗನವಾಡಿ ಕಾರ್ಯಕರ್ತೆ / ಆಶಾ ಕಾರ್ಯಕರ್ತೆ/ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ರವರನ್ನು ಸಂಪರ್ಕಿಸಿ 0-5 ವರ್ಷದ ಮಕ್ಕಳಿಗೆ ಲಸಿಕೆಯನ್ನು ಹಾಕಿಸಬಹುದಾಗಿದೆ.
* ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಮಿಷನ್ ಇಂದ್ರಧನುಷ್ ಮೊದಲನೇ ಸುತ್ತಿನ ಲಸಿಕಾಕರಣದಲ್ಲಿ
517 ಗರ್ಭಿಣಿ ಮಹಿಳೆಯರು ,2 ವರ್ಷದೊಳಗಿನ 1598 ಮಕ್ಕಳು ಹಾಗೂ 2 ರಿಂದ 5 ವರ್ಷದೊಳಗಿನ 43 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
ಒಟ್ಟಾರೆ ಜಿಲ್ಲೆಯಲ್ಲಿ 506 ಮಿಷನ್ ಇಂದ್ರ ಧನುಷ್ ಲಸಿಕಾ ಸತ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ.
ಯಾವುದೇ ಗರ್ಭಿಣಿ ಮಹಿಳೆ ಮತ್ತು ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಆರೋಗ್ಯವಂತ ಸಮಾಜ ನಿರ್ಮಿಸುವುದು ಈ ಅಭಿಯಾನದ ಪ್ರಮುಖ ಗುರಿಯಾಗಿದೆ.