ಚಿಕ್ಕಬಳ್ಳಾಪುರ: ಸಮಾಜದ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯವಾಗಲಿದ್ದು, ಈ ದಿಸೆಯಲ್ಲಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಅಗತ್ಯವಿರುವ ಪ್ರೋತ್ಸಾಹ ನೀಡಬೇಕು ಎಂದು ಎಸ್‍ಆರ್‍ಎಸ್ ಅಕ್ಷತಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಸ್‍ಆರ್‍ಎಸ್ ವಿ.ದೇವರಾಜ್ ತಿಳಿಸಿದರು.
ಎಸ್‍ಆರ್‍ಎಸ್ ಅಕ್ಷತಾ ಚಾರಿಟಬಲ್ ಟ್ರಸ್ಟ್ ಹಾಗೂ ಲಯನ್ಸ್ ಕ್ಲಬ್ ಸಹಯೋಗದಿಂದ ಶನಿವಾರ ತಾಲ್ಲೂಕಿನ ನಂದಿ ಗ್ರಾಮದ ನಮ್ಮೂರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಊಟದ ತಟ್ಟೆಗಳನ್ನು ವಿತರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಶಿಕ್ಷಣ ಪಡೆದಾಗ ಮಾತ್ರ ಆರ್ಥಿಕ, ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಬಹುದಾಗಿದೆ ಎಂದರು.
ಇಂದು ಬಹುತೇಕ ಮಂದಿ ಸರ್ಕಾರಿ ಕೆಲಸಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಸರ್ಕಾರಿ ಶಾಲೆಯಲ್ಲಿ ಓದಿದವರೇ ಆಗಿದ್ದು, ಇದು ಹೆಮ್ಮೆಯ ವಿಚಾರವಾಗಿದೆ. ಮಕ್ಕಳು ಸರ್ಕಾರಿ ಶಾಲೆಯೆಂಬ ಕೀಳರಿಮೆ ತೊರೆದು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಭವಿಷ್ಯದಲ್ಲಿ ಉನ್ನತ ಅಧಿಕಾರಿಗಳಾಗಬೇಕು. ಜನಸಾಮಾನ್ಯರಿಗೆ ಒಳ್ಳೆಯ ಸೇವೆಯನ್ನು ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಹೆಸರುಗಳಿಸಬೇಕು. ಅದೇ ನೀವು ನಮಗೆ ಕೊಡುವ ಕೊಡುಗೆ ಎಂದರು.
ಮಕ್ಕಳು ಮೊಬೈಲ್ ಟಿವಿ, ಸಿನಿಮಾ ಇವುಗಳಿಂದ ದೂರವಿರಬೇಕು. ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು. ಸದಾ ಸಕಾರತ್ಮಕ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳ ಕಲಿಕೆಗೆ ಪೋಷಕರು ಸಹ ಅನುಕೂಲತೆ ಕಲ್ಪಿಸಿಕೊಡಬೇಕು, ಪ್ರಾಥಮಿಕ ಹಂತದಲ್ಲಿಯೇ ಒಳ್ಳೆಯ ಸಂಸ್ಕಾರ, ಶಿಸ್ತು, ಸಮಯ ಪ್ರಜ್ಞೆ ರೂಢಿಸಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಬೇಕು ಎಂದು ಹೇಳಿದರು.
ಎಸ್‍ಆರ್‍ಎಸ್ ಅಕ್ಷತಾ ಚಾರಿಟಬಲ್ ಟ್ರಸ್ಟ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ. ಈಗಾಗಲೇ ಹಲವು ವರ್ಷಗಳಿಂದ ಸರ್ಕಾರಿ ಶಾಲಾ-ಕಾಲೇಜಿನ ಮಕ್ಕಳ ಓದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಂಡು ಬರುತ್ತಿದ್ದು, ಈ ಕಾರ್ಯ ಹೀಗೆ ಮುಂದುವರೆಯಲಿದೆ ಎಂದರು.
ಶಾಲೆಯ ಮುಖ್ಯಶಿಕ್ಷಕಿ ಸುವರ್ಣದೇವಿ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅಕ್ಷತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ಸುನೀಲ್, ಮುರಳೀಧರ್, ವೆಂಕಟಪ್ಪ, ಗೋವಿಂದ್, ಕಾಂತರಾಜು ಉಪಸ್ಥಿತರಿದ್ದರು.
ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ-ಎಸ್‍ಆರ್‍ಎಸ್ ದೇವರಾಜ್
RELATED ARTICLES