ಕಲಾತ್ಮಕ ನೃತ್ಯಾಭಿನಯದ ಅನನ್ಯ ನರ್ತನ ಸೊಬಗು

0
258

ವಿಶ್ವ ಪ್ರಸಿದ್ಧಿ ಪಡೆದ ‘ಕಲಾಕ್ಷೇತ್ರ’ದ ಅಸ್ಮಿತೆ ಇಂದು ನೃತ್ಯ ಜಗತ್ತಿನಲ್ಲಿ ಮನೆಮಾತು. ಅದನ್ನು ಸ್ಥಾಪಿಸಿ ವಿಶಿಷ್ಟ ನೃತ್ಯಪರಂಪರೆಯೊಂದಕ್ಕೆ ಅಡಿಪಾಯ ಹಾಕಿದ ನೃತ್ಯಜ್ಞೆ ಡಾ. ರುಕ್ಮಿಣೀ ದೇವಿ ಅರುಂಡೆಲ್ ಅವರ ಬಳಿ ತರಬೇತಿ ಪಡೆಯುವುದು ಕೂಡ ವಿಶೇಷವೇ. ಅಂಥ ಕಲಾಭಾಗ್ಯ ಪಡೆದ ನೃತ್ಯದಿಗ್ಗಜ, ಶಾಂತಲಾದೇವಿ ಪ್ರಶಸ್ತಿ ಪುರಸ್ಕೃತ ಅತ್ಯಂತ ಹಿರಿಯ ಗುರು- ಡಾ. ಎಂ.ಆರ್.ಕೃಷ್ಣಮೂರ್ತಿ, ಶಿಷ್ಯರಿಗೆ ಪ್ರೀತಿಯ ‘ಕಿಟ್ಟು ಸರ್’. ಇವರ ಅನುಭವದ ಮೂಸೆಯೊಳಗೆ ಒಡಮೂಡಿದ ಕಲಾಶಿಲ್ಪ ಅನನ್ಯ ರಾಜಾರಾಂ ಇತ್ತೀಚೆಗೆ ನಗರದ ಜೆ.ಎಸ್.ಎಸ್. ಆಡಿಟೋರಿಯಂ ನಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಿದಳು. ಪಂದನಲ್ಲೂರು ಬಾನಿಯ ಸಾತ್ವಿಕಾಭಿನಯದ ಸೊಗಡು, ಜತಿಗಳ ನವಿರು, ಅಂಗಶುದ್ಧ ನರ್ತನದ ಸೊಗಸು, ಶಾಸ್ತ್ರೀಯ ನೃತ್ಯಚೌಕಟ್ಟಿನ ಸೌಂದರ್ಯ ನೆರೆದ ಪ್ರೇಕ್ಷಕರ ಮೆಚ್ಚುಗೆ ಪಡೆದು ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದ್ದು ನಿಜಕ್ಕೂ ಅವಿಸ್ಮರಣೀಯ.
ಗುರು ಕೃಷ್ಣಮೂರ್ತಿ ಅವರು ನೀಡಿದ ಶಿಸ್ತಿನ ನೃತ್ಯ ತರಬೇತಿಯನ್ನು ಬಹು ಶ್ರದ್ಧೆ-ಪರಿಶ್ರಮಗಳಿಂದ ಅಭ್ಯಾಸ ಮಾಡಿರುವ ಅನನ್ಯ ಬಹು ಅಚ್ಚುಕಟ್ಟಾಗಿ, ಸ್ಫುಟವಾದ ಆಂಗಿಕಾಭಿನಯ, ಹದವಾದ ಅಭಿನಯ ರಮ್ಯತೆಯಲ್ಲಿ ಪ್ರೇಕ್ಷಕರ ಮನಗೆದ್ದಳು. ಶುಭಾರಂಭಕ್ಕೆ ಗುರು ಸ್ತೋತ್ರದೊಂದಿಗೆ ನಾಟ್ಯಾರಂಭಿಸಿ ‘ಮಾರ್ಗಂ’ ಪದ್ಧತಿಯ ಸಾಂಪ್ರದಾಯಕ ರಚನೆಗಳಾದ ಅಲ್ಲರಿಪು, ಜತಿಸ್ವರ, ಶಬ್ದಂ ಮತ್ತು ವರ್ಣಗಳನ್ನು ದೈವೀಯ ಆಯಾಮದಲ್ಲಿ ಅರ್ಪಿಸಿದಳು ಅನನ್ಯ. ಅನಂತರ ಲೋಕಧರ್ಮೀಯ ಕೃತಿಗಳಾದ ಮಾರ್ಮಿಕ ಅಭಿನಯದ ಪದಂ, ಭಕ್ತಿತಾದಾತ್ಮ್ಯತೆಯ ದೇವರನಾಮ, ಸುಮನೋಹರ ಪ್ರಸ್ತುತಿಯ ಅಂತಃಪುರ ಗೀತೆ, ರಮಣೀಯ ಆಯಾಮದ ಜಯದೇವನ ಶೃಂಗಾರ ಕೃತಿಗಳನ್ನು ಸಾಕ್ಷಾತ್ಕರಿಸಿದ ಕಲಾವಿದೆ ಅಪರೂಪದ ಅಠಾಣ ರಾಗದ ಸುಂದರ ತಿಲ್ಲಾನ-ಮಂಗಳದೊಂದಿಗೆ ತನ್ನ ಪ್ರಸ್ತುತಿಯನ್ನು ಸಂಪನ್ನಗೊಳಿಸಿದಳು.
ನೃತ್ಯಕ್ಕೆ ಕಮನೀಯ ಪ್ರಭಾವಳಿ ನೀಡಿದ ವಾದ್ಯಗೋಷ್ಠಿ ಆನಂದದ ಅಲೆಯಲ್ಲಿ ತೇಲಿಸಿದ ಸಮತೋಲನದ ನೆಲೆ ಕಾಯ್ದುಕೊಂಡಿತ್ತು. ಮನಸ್ಸಿಗೆ ಮುದನೀಡಿದ ಹರಿಪ್ರಸಾದರ ಮೆಲುದನಿಯ ಸುಶ್ರಾವ್ಯ ಸಂಗೀತ-ಮಹೇಶಸ್ವಾಮಿಯ ಮಾಂತ್ರಿಕ ವೇಣುವಾದನ, ದಯಾಕರರ ಸುನಾದದ ವಯೊಲಿನ್ ನಿನಾದ ಮತ್ತು ನೃತ್ಯಗತಿಗೆ ಪೂರಕವಾದ ರಮೇಶರ ಸಂಯಮದ ಮೃದಂಗ ಮೇಳ ಮತ್ತು ಸುಸ್ಪಷ್ಟ-ನಿಖರ ಉಚ್ಚಾರದ ಮಾಧುರಿ ಶ್ರೀನಿವಾಸನರ ನಟುವಾಂಗ ಮನಸ್ಸಿಗೆ ತಂಗಾಳಿಯ ತಂಪನ್ನು ನೀಡಿತು.
ರಂಗಪ್ರವೇಶ ಸಮಾರಂಭದಲ್ಲಿ ಗುರು ಕೃಷ್ಣಮೂರ್ತಿ ಅವರ ಜೊತೆ ಹಿರಿಯ ನೃತ್ಯ ಇತಿಹಾಸಜ್ಞೆಯರಾದ ಡಾ. ಚೂಡಾಮಣಿ ನಂದಗೋಪಾಲ್ ಮತ್ತು ಡಾ. ಕರುಣಾ ವಿಜಯೇಂದ್ರ ಅತಿಥಿಗಳಾಗಿ ಆಗಮಿಸಿದ್ದರು. ವೇದಿಕೆಯ ಮೇಲೆ ಅನನ್ಯಳ ಪೋಷಕರಾದ ಶಾರದಾ ಶರ್ಮ ಮತ್ತು ರಾಜಾರಾಂ ಉಪಸ್ಥಿತರಿದ್ದರು.
***** ವೈ.ಕೆ.ಸಂಧ್ಯಾ ಶರ್ಮ