Thursday, November 30, 2023
Homeಇದೀಗ ಬಂದ ತಾಜಾ ಸುದ್ದಿಪ್ರಣಿತಾ ಸುಧೀರ್ ಭರತನಾಟ್ಯ ಮತ್ತು ಮೋಹಿನಿಯಾಟ್ಟಂ ಏಕವ್ಯಕ್ತಿ ಪ್ರದರ್ಶನ

ಪ್ರಣಿತಾ ಸುಧೀರ್ ಭರತನಾಟ್ಯ ಮತ್ತು ಮೋಹಿನಿಯಾಟ್ಟಂ ಏಕವ್ಯಕ್ತಿ ಪ್ರದರ್ಶನ

ಖ್ಯಾತ ‘ನೃತ್ಯಧಾಮ ಟೆಂಪಲ್ ಆಫ್ ಫೈನ್ ಆರ್ಟ್ಸ್’ ಸಂಸ್ಥೆಯ ನಾಟ್ಯಾಚಾರ್ಯ ಡಾ. ರೇಖಾ ರಾಜು ಪ್ರಸಿದ್ಧ ಮೋಹಿನಿಯಾಟ್ಟಂ ಮತ್ತು ಭರತನಾಟ್ಯ ಅಂತರರಾಷ್ಟ್ರೀಯ ನೃತ್ಯಕಲಾವಿದೆ ಮತ್ತು ನಾಟ್ಯಗುರು. ಇವರ ಉತ್ತಮ ಶಿಕ್ಷಣದಲ್ಲಿ ತರಬೇತಿಗೊಂಡ ಕಲಾಕುಸುಮ ಹದಿಮೂರು ವರ್ಷದ ಪ್ರಣಿತಾ ಸುಧೀರ್ ಬಹುಮುಖ ಪ್ರತಿಭೆ. ಕಲಾರಾಧಕರಾದ ಶ್ರೀಮತಿ ಸಂಧ್ಯಾ ಕೆ.ಎಸ್. ಮತ್ತು ಸುಧೀರ್ ಗಣೇಶ್ ಪುತ್ರಿಯಾದ ಇವಳು, ತನ್ನ ಆರುವರ್ಷಕ್ಕೆ ಭರತನಾಟ್ಯ ಕಲಿಯಲಾರಂಭಿಸಿ, ಏಳುವರ್ಷಕ್ಕೆ ‘ಗೆಜ್ಜೆಪೂಜೆ’ ನೆರವೇರಿಸಿಕೊಂಡಿದ್ದು ಇವಳ ವೈಶಿಷ್ಟ್ಯ. ಕಳೆದ ಮೂರುವರ್ಷಗಳಿಂದ ರೇಖಾ ಅವರ ಮಾರ್ಗದರ್ಶನದಲ್ಲಿ ಮೋಹಿನಿಯಾಟ್ಟಂ ನೃತ್ಯವನ್ನೂ ಕೂಡ ಕಲಿಯುತ್ತಿದ್ದಾಳೆ. ಬದ್ಧತೆಯಿಂದ ಕಳೆದ ಏಳುವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತ ಬಂದಿರುವ ಪ್ರಣಿತಾ ಆಗಸ್ಟ್ ತಿಂಗಳ 5 ನೇ ತಾ. ಶನಿವಾರ ಸಂಜೆ 6 ಗಂಟೆಗೆ ಶ್ರೀಕೃಷ್ಣದೇವರಾಯ ಕಲಾಮಂದಿರದಲ್ಲಿ ವಿದ್ಯುಕ್ತವಾಗಿ ‘ನಮನಾಂಜಲಿ’ಯಲ್ಲಿ ತನ್ನ ಏಕವ್ಯಕ್ತಿ ಪ್ರದರ್ಶನವನ್ನು ಪ್ರಥಮ ಬಾರಿಗೆ ಪ್ರೇಕ್ಷಕರ ಸಮಕ್ಷಮ ಮಾಡಲಿದ್ದು, ಅವಳ ನೃತ್ಯಸೊಬಗನ್ನು ವೀಕ್ಷಿಸಲು ಸಮಸ್ತ ಕಲಾರಸಿಕರಿಗೂ ಮುಕ್ತ ಸ್ವಾಗತ.

ಬಹುಮುಖ ವ್ಯಕ್ತಿತ್ವವುಳ್ಳ ಪ್ರಣಿತಾ, ಈಗಾಗಲೇ ಪುಣೆಯ ಗಂಧರ್ವ ಮಹಾವಿದ್ಯಾಲಯದಲ್ಲಿ ಪ್ರಾರಂಭಿಕ, ಪ್ರವೇಶಿಕಾ ಮತ್ತು ಮಧ್ಯಮ ಪ್ರಥಮ್ ಭರತನಾಟ್ಯದ ಪರೀಕ್ಷೆಗಳನ್ನು ಉತ್ತಮಾಂಕಗಳಲ್ಲಿ ಪಡೆದುಕೊಂಡಿದ್ದಾಳೆ.
‘ನೃತ್ಯಧಾಮ ಟೆಂಪಲ್ ಆಫ್ ಫೈನ್ ಆರ್ಟ್ಸ್’ ಸಂಸ್ಥೆಯ – ಎರಡೂ ಶೈಲಿಯ ಅನೇಕ ನೃತ್ಯ ಪ್ರದರ್ಶನಗಳಲ್ಲಿ ಪಾಲ್ಗೊಂಡಿರುವ ಹೆಮ್ಮೆ ಇವಳದು. ಅವುಗಳಲ್ಲಿ ಮೈಸೂರಿನಲ್ಲಿ ನಡೆದ 24 ನೆಯ ನಿರಂತರ ಕಲೆಮನೆ ಉತ್ಸವ, ಯುವ ದಸರಾ, ಕಾರ್ತೀಕ ಲಕ್ಷ ದೀಪೋತ್ಸವ, ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಚಿನ್ನ ಕಲಾನಾದಂ, ಹೊರನಾಡು ಅನ್ನಪೂರ್ಣೆಶ್ವರಿ ದೇವಾಲಯ, ಕೋದಂಡರಾಮ ದೇವಾಲಯ ಸಾಯಿಬಾಬ ದೇವಾಲಯ ಮುಂತಾದ ಅನೇಕ ದೈವಸನ್ನಿಧಿಗಳಲ್ಲಿ ನರ್ತನ ಸೇವೆ ಸಲ್ಲಿಸಿದ ಧನ್ಯತೆ ಇವಳದು.


ಶಾಲೆಯಲ್ಲೂ ನೃತ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಪ್ರಣಿತಾ ಕಾನ್ಟೆಂಪೊರರಿ ನೃತ್ಯದಲ್ಲೂ ‘ಸೈ’ ಎನ್ನಿಸಿಕೊಂಡಿದ್ದಾಳೆ. ನೃತ್ಯಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗಳಿಸಿರುವ ಇವಳು ಹೆಚ್ ಬಿ ಆರ್ ಲೇ ಔಟ್ನಲ್ಲಿರುವ ಎಸ್.ಜೆ.ಆರ್. ಶಾಲೆಯಲ್ಲಿ ಪ್ರಸ್ತುತ 8 ನೆಯ ತರಗತಿಯಲ್ಲಿ ಓದುತ್ತಿದ್ದಾಳೆ. ಡ್ರಾಯಿಂಗ್, ಪೇಯಿಂಟಿಂಗ್, ಗಿಟಾರ್ ವಾದನ ಮುಂತಾದವು ಇವಳ ಹವ್ಯಾಸಗಳು. ಶಾಲೆಯಲ್ಲಿ ಕರಾಟೆಯ ಪ್ರಾರಂಭಿಕ ತರಬೇತಿ ಹೊಂದುತ್ತಿದ್ದು, ಅದರಲ್ಲಿ ಆಸಕ್ತಿಯಿಂದ ಟೈಕ್ವೊಂಡೋ ಕಲಿಯುತ್ತಿರುವಳು. ಓದಿನಲ್ಲೂ ಜಾಣೆಯಾಗಿರುವ ಇವಳು ಶಾಲೆಯ ಥ್ರೋಬಾಲ್ ಟೀಂನಲ್ಲಿ ಆಡುತ್ತಿದ್ದು ಕ್ರೀಡೆಯಲ್ಲೂ ಸಾಕಷ್ಟು ಚಟುವಟಿಕೆ ತೋರುತ್ತಿದ್ದಾಳೆ. ಶಾಲೆಯ ಮಾರ್ಚಿಂಗ್ ಬ್ಯಾಂಡ್ ನಲ್ಲೂ ಸಕ್ರಿಯೆ. ಈಗಾಗಲೇ ನಾಯಕತ್ವದ ಗುಣವನ್ನು ಪ್ರಕಟಿಸುತ್ತಿರುವ ಪ್ರಣಿತಾಗೆ ಇಂಜಿನಿಯರ್ ಆಗುವ ಗುರಿ ಇದ್ದು, ನೃತ್ಯರಂಗದಲ್ಲೂ ಸಾಧನೆ ಮಾಡುವ ಆಸೆ ಇದೆ.
******** ವೈ.ಕೆ.ಸಂಧ್ಯಾ ಶರ್ಮ

RELATED ARTICLES
- Advertisment -
Google search engine

Most Popular

Recent Comments