Thursday, November 30, 2023
Homeಇದೀಗ ಬಂದ ತಾಜಾ ಸುದ್ದಿಸೃಜನಶೀಲ ಕಲಾ ನೈಪುಣ್ಯತೆ ಚಂದ್ರಕಾಂತ ನಾಯರ್

ಸೃಜನಶೀಲ ಕಲಾ ನೈಪುಣ್ಯತೆ ಚಂದ್ರಕಾಂತ ನಾಯರ್

ಹಾಸನ: ಕಲೆ ತಾಂತ್ರಿಕ ಪ್ರಾವಿಣ್ಯತೆಯನ್ನು ವ್ಯಕ್ತಪಡಿಸಲು ಸೃಜನಶೀಲ ಕಲ್ಪನೆಯನ್ನು ಒಳಗೊಂಡ ಮಾನವ ಚಟುವಟಿಕೆಗಳು ವೈವಿದ್ಯಮಯ, ಕಲೆ ಎಂದಾಕ್ಷಣ ನಾಟಕ, ಸಂಗೀತ, ನೃತ್ಯ ಹೇಗೆ ನಮ್ಮ ಕಣ್ಮುಂದೆ ಅನೇಕ ಪ್ರಕಾರಗಳು ಹಾದು ಹೋಗುತ್ತವೆಯೋ ಅಂತೆಯೇ ಕಲಾ ಪ್ರಕಾರಗಳಲ್ಲೂ ಹಲವು ಬಗೆಯ ಕಲಾ ರಚನೆಗಳು ಶಿಲಾ ಕೆತ್ತನೆಗಳು ಕಣ್ಮುಂದೆ ತೇಲಿ ಬರುತ್ತವೆ. ಅನೇಕ
ಕಲಾವಿದರು ಸಾವಿರಾರು ವರ್ಷಗಳಿಂದ ತಮ್ಮದೇ ಆದ ಕೊಡುಗೆಯನ್ನು ಕಲಾಕ್ಷೇತ್ರಕ್ಕೆ ನೀಡುತ್ತಾ ಬಂದಿದ್ದಾರೆ. . ಕಾಲ ಉರುಳಿದಂತೆದಂತೆ ಕಲಾ ಕ್ಷೇತ್ರದಲ್ಲಿನ ಪ್ರಾಯೋಗಿಕ ಚಟುವಟಿಕೆ, ಬದಲಾವಣೆಗಳು ಚಿತ್ರಕಲೆಯಲ್ಲೂ ಸಹಜವೇ ಸರಿ.
*ಚಿತ್ರ ಕಲಾವಿದ ಚಂದ್ರಕಾಂತ್ ನಾಯರ್ ರವರು ಶ್ರೀಮತಿ ಕನ್ನಿಕಾ ಮತ್ತು ಶ್ರೀ ಬಾಲಸುಬ್ರಮಣ್ಯಂ ದಂಪತಿಗಳ ಸುಪುತ್ರರಾಗಿ ಹಾಸನ ಜಿಲ್ಲೆ ಯ ಅರಸೀಕೆರೆ ಯಲ್ಲಿ ೨೭ ನವೆಂಬರ್ ೧೯೮೬ ಜನಿಸಿದರು. ಬಾಲ್ಯದಿಂದಲೂ ಚಿತ್ರಕಲೆಯ ಬಗ್ಗೆ ಅಪಾರ ಆಸಕ್ತಿ ಉಳ್ಳವರಾಗಿ ಅವರ ಬಾಲ್ಯ ನೆನಪು ಯಾವಾಗಲೂ ಚಿತ್ರಕಲೆಗಳು ಆಗಿವೆ. ತಮ್ಮ ಪ್ರೌಡ ಮತ್ತು ಕಾಲೇಜು ಶಿಕ್ಷಣವನ್ನು ಅರಸೀಕೆರೆಯಲ್ಲಿ ಮುಗಿಸಿ ನಂತರ ತಮ್ಮ ಬಿ.ಎಫ್.ಎ.ಪದವಿಯನ್ನು ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪಡೆದರು. ಸುಮಾರು 15 ವರ್ಷಗಳಿಂದ ಚಿತ್ರಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಇವರು ಚಿತ್ರಕಲಾ ಶಿಕ್ಷಕರಾಗಿ ರಾಜ್ಯದ ಅನೇಕ ಪ್ರತಿಷ್ಠಿತ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಸಾವಿರಾರು ಮಕ್ಕಳಿಗೆ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸಿ ಅವರಲ್ಲಿನ ಸೃಜನಶೀಲ ಕಲೆಯನ್ನು ಹೊರತರುವಲ್ಲಿ ಯಶಸ್ವಿ ಆಗಿದ್ದಾರೆ. ಚಂದ್ರಕಾಂತ್ ನಾಯರ್ ರವರು ವಾಸ್ತವಿಕ ಮತ್ತು ಸಮಕಾಲೀನ ಚಿತ್ರಕಲೆಯನ್ನು ಮೈಗೂಡಿಸಿಕೊಂಡವರು. ಇವರ ಕುಂಚದಿಂದ ಸಾವಿರಾರು ಕಲಾಕೃತಿಗಳು ಮೈದೆಳದಿವೆ. ಇವರು ಜಲವರ್ಣ ಚಿತ್ರ ಕಲೆಯಲ್ಲಿ ಪಾರದರ್ಶಕ ವಿಧಾನವನ್ನು ವಿಶಿಷ್ಟ ಶೈಲಿಯಲ್ಲಿ ಬಳಸುವ ಮೂಲಕ ಸ್ಮಾರಕಗಳು , ದೇವಾಲಯಗಳು , ಶಿಲ್ಪಗಳು ಪ್ರಾಣಿ ಪಕ್ಷಿಗಳನ್ನು ಚಿತ್ರಿಸಿರುವರು. ಸಮಕಾಲೀನ ಕಲಾ ಶೈಲಿಯಲ್ಲಿ ಸೃಜನಾತ್ಮಕ ಪ್ರಸಂಶನೀಯ ಕ್ಯಾನ್ವಾಸ್ ಬಳಸಿಕೊಳ್ಳುವುದು ಇವರ ಕಲಾ ಕೌಶಲ್ಯವೇ ಸೈ. ಇವರ ಕಲಾ ರಚನೆಯಲ್ಲಿ ಗಮನಿಸಬಹುದಾದ ಒಂದು ಪ್ರಮುಖ ಅಂಶವೆಂದರೆ ಕೃತಿಗಳಲ್ಲಿ ಕಲಾ ವಸ್ತುವು ಸೃಜನಶೀಲ ಅಭಿವ್ಯಕ್ತಿ ಪಡೆದುಕೊಂಡು ವಿಭಿನ್ನತೆಯ ಪ್ರಾವೀಣ್ಯತೆ ಸಾಧಿಸುತ್ತದೆ . ಇವರು ಸದಾ ಅನ್ವೇಷಣಾ ಮನೋಭಾವ ಉಳ್ಳವರಾಗಿ ತಮ್ಮ ಕಲಾಕೃತಿಗಳಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಲೇ ಇರುತ್ತಾರೆ . ಇದರ ಪರಿಣಾಮ ಅವರ ಹಿಂದಿನ ಕಲಾಕೃತಿಗಳಿಗಿಂತ ಈಗಿನ ಕೃತಿಗಳು ನೋಡುಗರಿಗೆ ವಿಭಿನ್ನವಾಗಿ ಕಂಡುಬಂದರೂ ಕಲಾವಿದ ತಮ್ಮ ಕಲಾಕೃತಿಗಳಲ್ಲಿ ತಮ್ಮತನವನ್ನು ಬಿಟ್ಟು ಕೊಟ್ಟಂತೆ ಗೋಚರಿಸುವುದಿಲ್ಲ . ಕ್ಯಾನ್ವಾಸ್ ಮೇಲೆ ಆಕ್ರಿಲಿಕ್ ಮಾದ್ಯಮದಲ್ಲಿ ಮೂಡಿ ಬಂದ ಇತ್ತೀಚಿನ ಕಲಾಕೃತಿಗಳಲ್ಲಿ ದಕ್ಷಿಣ ಕನ್ನಡದ ಸಂಸ್ಕೃತಿ ಆಚರಣೆಗೆ ಮಾರು ಹೋದಂತೆ ಕಂಡರೂ ತಮ್ಮ ಕೃತಿಗಳಲ್ಲಿ ಕಂಡು ಬರುವ ಅವರ ಚಿತ್ರ ಸಂಯೋಜನೆ , ರೇಖಾ ಶೈಲಿ , ಬಣ್ಣ ಮುಂತಾದವುಗಳಲ್ಲಿ ತಮ್ಮ ಛಾಪನ್ನು ಎತ್ತಿ ಹಿಡಿದಿದ್ದಾರೆ.ಕಲಾವಿದರ ಕೃತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ದಕ್ಷಿಣ ಕನ್ನಡದಲ್ಲಿ ಕಂಡುಬರುವ ದ್ಯೆವಾರಾಧನೆ ಆಚರಣೆಯ ವಿವಿಧ ಆಯಾಮಗಳನ್ನು ಮನಸ್ಸಿಗೆ ಮುಟ್ಟುವಂತೆ ಚಿತ್ರಿಸಿ , ನೋಡುಗರ ಮನ ಸೆಳೆಯುತ್ತವೆ.


ಇವರ ಕೈ ಚಳಕದಿಂದ ರೂಪುಗೊಂಡ ಆನೇಕ ಕಲಾಕೃತಿಗಳು ದೇಶ ವಿದೇಶಗಳಲ್ಲಿ ಪ್ರದಶ೯ನಗೊಂಡು ಅನೇಕ ಹಿರಿಯ ಕಲಾವಿದರು ಕಲಾ ವಿಮರ್ಶಕರು ಪ್ರಶಂಸಿಸಿದ್ದಾರೆ. ಇವರ ಕಲಾಕೃತಿಗಳು ಮೈಸೂರು ದಸರಾ , ಬೆಂಗಳೂರು ಕಲಾಮೇಳ , ಆಳ್ವಾಸ್ ನುಡಿಸಿರಿ , ದೆಹಲಿ , ರಾಜಸ್ತಾನ್ ಸೇರಿದಂತೆ ಐವತ್ತಕ್ಕೂ ಹೆಚ್ಚು ಕಲಾ ಪ್ರದರ್ಶನಗಳಲ್ಲಿ ಪ್ರದರ್ಶನಗೊಂಡು ಬಹುಮಾನ ಪ್ರಶಸ್ತಿ ಗಳಿಸಿವೆ. ಕನಾ೯ಟಕ ಲಲಿತ ಕಲಾ ಅಕಾಡೆಮಿ ಮತ್ತು ದೇಶದ ಆನೇಕ ಖಾಸಗಿ ಅಕಾಡೆಮಿಗಳಿಂದ
ಆಯೋಜಿಸಿದ ಕಲಾ ಶಿಬಿರದಲ್ಲಿ ಭಾಗವಹಿಸಿ ಆನು‌ಭವ ಜ್ಞಾನ ವೃದ್ಧಿಸಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರಕಲಾ ಪ್ರದಶ೯ನ ಮತ್ತು 2018ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರಕಲಾ ಪ್ರದಶ೯ನದಲ್ಲಿ ಭಾಗವಹಿಸಿರುವುದು ಹೆಮ್ಮೆಯ ಸಾಧನೆಯಾಗಿದೆ. ಈ ಎಲ್ಲಾ ಸಾಧನೆಯನ್ನು ಗುರುತಿಸಿ 2020ರಲ್ಲಿ ಹಾಸನ ಜಿಲ್ಲಾಡಳಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಪ್ರಸ್ತುತ ಹಾಸನದ ರಾಯಲ್ ಅಪೊಲೊ ಅಂತಾರಾಷ್ಟ್ರೀಯ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
– ಗೊರೂರು ಅನಂತರಾಜು
ಹಾಸನ

RELATED ARTICLES
- Advertisment -
Google search engine

Most Popular

Recent Comments