ಬೆಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ರಿಂದ ಪ್ರಾದೇಶಿಕ ಭಾಷೆಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಗೋವಿಂದನ್ ರಂಗರಾಜನ್ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಗೆ ಮೂರು ವರ್ಷಗಳ ಪೂರೈಸುತ್ತಿರುವ ಸಂದರ್ಭದಲ್ಲಿ ಕೇಂದ್ರ ವಾರ್ತಾ ಶಾಖೆಯ ಬೆಂಗಳೂರು ವತಿಯಿಂದ ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿಯು ಎಲ್ಲ ಭಾಷೆಯ ಮಕ್ಕಳು ಹಾಗೂ ವಿಷಯಗಳ ಮಧ್ಯೆ ಸಮನ್ವಯ ಸಾದಿಸಿದೆ ಹಾಗೂ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕೇಂದ್ರೀಯ ವಿದ್ಯಾಲಯ, ಸಿಬಿಎಸ್‌ಇ ಶಿಕ್ಷಣ ಸಂಸ್ಥೆಗಳು, ನವೋದಯ ವಿದ್ಯಾಲಯ, ಕೌಶಲ್ಯ ಕೇಂದ್ರಗಳು ಸೇರಿದಂತೆ ಕೇಂದ್ರದ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮೊದಲು ಸಣ್ಣ ಸಣ್ಣ ವ್ಯತ್ಯಾಸಗಳಿದ್ದವು. ಆದರೆ ಎನ್‌ಇಪಿ ಜಾರಿಯಾದ ನಂತರ ಒಂದೇ ರೀತಿಯ ಶಿಕ್ಷಣ ಸಾಧ್ಯವಾಗಿದೆ ಎಂದು ತಿಳಿಸಿದರು.
ಐಐಎಂ ನಿರ್ದೇಶಕರಾದ ಪ್ರೊ. ರಿಷಿಕೇಶ ಕೃಷ್ಣ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳಿಗೆ ಬಹು ಆಯ್ಕೆಯ ಕಾರ್ಯಕ್ರಮಗಳ ಜೊತೆಗೆ ಅಂತರ್ಜಾಲ ಕಲಿಗೆ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಪಿಐಬಿ ಯ ಹೆಚ್ಚುವರಿ ಮಹಾನಿರ್ದೇಶಕರಾದ ಎಸ್.ಜಿ ರವೀಂದ್ರ, ಎನ್ ಐಟಿ ಸೂರತ್ಕಲ್ ನಿರ್ದೇಶಕರಾದ ಪ್ರೊ. ಬಿ. ರವಿ, ಐಐಟಿ ಧಾರವಾಡ ನಿರ್ದೇಶಕರಾದ ಪ್ರೊ. ಎನ್.ಎಸ್ ಪುಣೇಕರ್, ಆರ್‌ಡಿಎಸ್‌ಡಿಇ ಪ್ರಾದೇಶಿಕ ನಿರ್ದೇಶಕರಾದ ಬಿ.ಎನ್ ಶ್ರೀಧರ್, ಸಿಬಿಎಸ್‌ಇ ಪ್ರಾದೇಶಿಕ ಅಧಿಕಾರಿ ಪಿ. ರಮೇಶ್ ಮಾತನಾಡಿದರು.