Friday, December 1, 2023
Homeಇದೀಗ ಬಂದ ತಾಜಾ ಸುದ್ದಿತನ್ಮಯಗೊಳಿಸಿದ ತನುಶ್ರೀ ರಮ್ಯ ನೃತ್ಯನೈದಿಲೆ

ತನ್ಮಯಗೊಳಿಸಿದ ತನುಶ್ರೀ ರಮ್ಯ ನೃತ್ಯನೈದಿಲೆ

ಖ್ಯಾತ ನೃತ್ಯ ಕಲಾವಿದೆ-ಗುರು ಹೇಮಾ ಪ್ರಭಾತ್ ‘ಸುಕೃತಿ ನಾಟ್ಯಾಲಯ’- ನೃತ್ಯಸಂಸ್ಥೆಯ ಸ್ಥಾಪಕಿ, ನೂರಾರು ವಿದ್ಯಾರ್ಥಿಗಳಿಗೆ ಕನ್ನಡ ಪ್ರೀತಿಯನ್ನು ಬೆಳೆಸುತ್ತಿರುವ ಸಾಧಕಿ. ಮಕ್ಕಳಿಗೆ ಕನ್ನಡ ಭಾಷೆ-ಚರಿತ್ರೆ-ಇತಿಹಾಸಗಳ ಪರಿಚಯ ಮಾಡಿಸುವುದಲ್ಲದೆ, ತಮ್ಮ ಶಿಷ್ಯರ ‘ರಂಗಪ್ರವೇಶ’ಗಳಲ್ಲಿ ಕನ್ನಡ ಕೃತಿಗಳನ್ನೇ ಪ್ರಸ್ತುತಪಡಿಸುವುದು ಇವರ ಅಸ್ಮಿತೆ. ಇದು ಅತ್ಯಂತ ವಿಶೇಷ ಕೂಡ. ಬೇರೆಯವರಿಗೆ ಮಾದರಿ. ಎಂದೋ ‘ಕಲಾಕ್ಷೇತ್ರ’ದಲ್ಲಿ ಪ್ರಚುರದಲ್ಲಿದ್ದ ತಮಿಳು ಕೃತಿಗಳನ್ನೇ ಇಂದೂ ರಂಗಪ್ರವೇಶಗಳಲ್ಲಿ ಅನೂಚಾನವಾಗಿ ಬಳಸಿಕೊಂಡು ಬರುತ್ತಿರುವ ಸಂಪ್ರದಾಯವನ್ನು ನಾವು ಕಾಣಬಹುದು. ಅದೂ ನೃತ್ಯಪ್ರಸ್ತುತಿಯ ಪ್ರಮುಖಘಟ್ಟದಲ್ಲಿ ತಮಿಳು ‘ವರ್ಣ’ ಗಳನ್ನು ಕಲಾವಿದರು ಅಭಿನಯಿಸುವುದು ಇಲ್ಲಿನ ಅನೇಕ ಜನರಿಗೆ ಅರ್ಥವಾಗುವುದಿಲ್ಲ. ಈ ನಿಟ್ಟಿನಲ್ಲಿ ಹೇಮಾ ಪ್ರಭಾತ್ ತುಂಬಾ ವಿಭಿನ್ನರಾಗಿ ನಿಲ್ಲುತ್ತಾರೆ. ಇವರಂತೆ ಇನ್ನೂ ಕೆಲವು ಗುರುಗಳು ಕನ್ನಡ ಕೃತಿಗಳಿಗೆ ಪ್ರಾಧಾನ್ಯ ಕೊಡುವುದನ್ನು ಕಾಣಬಹುದಾಗಿದೆ.


ಇತ್ತೀಚೆಗೆ ಚೌಡಯ್ಯ ಭವನದಲ್ಲಿ ನಡೆದ ಹೇಮಾ ಪ್ರಭಾತ್ ಶಿಷ್ಯೆ ಕು.ತನುಶ್ರೀ ನಾಗೇಂದ್ರ ತನ್ನ ‘ತನುಮನಾರ್ಪಣೆ’ ಕಾರ್ಯಕ್ರಮದಲ್ಲಿ ಅನೇಕ ಸುಂದರ ಕನ್ನಡಕೃತಿಗಳನ್ನು ಸಾಕ್ಷಾತ್ಕರಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರಳಾದಳು. ಕಲಾಪೂರ್ಣ ರಂಗಸಜ್ಜಿಕೆ, ನೃತ್ಯದ ರಂಗನ್ನು ವೃದ್ಧಿಸಿದ ಸುಶ್ರಾವ್ಯ ವಾದ್ಯಗೋಷ್ಠಿ ತನುಶ್ರೀಯ ದೈವೀಕ ಪ್ರಸ್ತುತಿಗೆ ಕಳೆ ನೀಡಿತ್ತು.
ಸಾಂಪ್ರದಾಯಿಕ ‘ಮಾರ್ಗಂ’ ಪದ್ದತಿಯ ಚೌಕಟ್ಟಿನಲ್ಲೇ ತನುಶ್ರೀಯ ನೃತ್ಯಕೃತಿಗಳ ಅನುಕ್ರಮಣಿಕೆ ಸುಲಲಿತವಾಗಿ ಸಾಗಿತು. ಶುಭಾರಂಭಕ್ಕೆ ‘ಪುಷ್ಪಾಂಜಲಿ’ಯಲ್ಲಿ ವಿವಿಧ ನೃತ್ತಲಾಸ್ಯದ ಸುಮನೋಹರ ಬಗೆಯಲ್ಲಿ, ದೇವಾನುದೇವತೆಗಳು, ಗುರು-ಹಿರಿಯರು, ಪ್ರೇಕ್ಷಕರು, ವಾದ್ಯವೃಂದ ಸಮಸ್ತರಿಗೂ ವಿನೀತಭಾವದ ನಮನಗಳನ್ನು ಸಲ್ಲಿಸಲಾಯಿತು. ಹಸನ್ಮುಖದಲ್ಲಿ ಕಲಾವಿದೆ ಪ್ರಥಮವಂದಿತ ಗಣೇಶನ ವಿವಿಧ ರೂಪ-ವೈಶಿಷ್ಟ್ಯಗಳನ್ನು ‘ಗಣಪತಿ ಸ್ತುತಿ’ಯಲ್ಲಿ,ತನ್ನ ಸಮರ್ಥ ಆಂಗಿಕಾಭಿನಯದಲ್ಲಿ ನಿರೂಪಿಸಿದಳು.
ಮುಂದಿನ ಕೃತಿ ‘ಶ್ರೀರಾಮ ಕೌತ್ವಂ’ ? ಶ್ರೀರಾಮನ ಸಮಗ್ರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನವಾಗಿತ್ತು. ಗುರು ಹೇಮಾ ಕೂಡ ಶಿಷ್ಯೆಯೊಡಗೂಡಿ ಲವಲವಿಕೆಯಿಂದ ನರ್ತಿಸಿದ್ದು ವಿಶೇಷವಾಗಿತ್ತು. ಹಿನ್ನಲೆಯ ಪರದೆಯ ಮೇಲೆ ಕಥಾಭಾಗಕ್ಕೆ ಸಂಬಂಧಿಸಿದಂತೆ ಚಿತ್ರಗಳು ಮೂಡಿಬರುತ್ತಿದ್ದವು. ಇಬ್ಬರೂ ಬೇರೆ ಬೇರೆ ಪಾತ್ರಗಳಾಗಿ ಅಭಿನಯಿಸುತ್ತ ನಾಟಕೀಯ ಆಯಾಮವನ್ನು ಕಟ್ಟಿಕೊಟ್ಟರು. ಅಹಲ್ಯೋದ್ಧಾರ, ಶಬರಿ ಮೋಕ್ಷ, ಮಾರೀಚ ಸಂಹಾರ, ಸುಗ್ರೀವ ಸಖ್ಯ, ಆಂಜನೇಯನ ಪರಿಚಯ, ವಾಲಿ-ಸುಗ್ರೀವ ಕಾಳಗ, ಸುಗ್ರೀವ ಪಟ್ಟಾಭಿಷೇಕ, ಸೀತಾನ್ವೇಷಣೆ, ಹನುಮನ ಸಮುದ್ರ ಲಂಘನ, ಸೀತೆಗೆ ಮುದ್ರೆಯುಂಗುರ ಕೊಟ್ಟು, ಚೂಡಾಮಣಿಯನ್ನು ಪಡೆದು ಶ್ರೀರಾಮನಿಗಿತ್ತು ರಾಮಪ್ರೀತಿ ಸಂಪಾದನೆ. ಕಡೆಗೆ ರಾಮ-ರಾವಣರ ಯುದ್ಧಾನಂತರ- ರಾಮ-ಸೀತಾರ ಪಟ್ಟಾಭಿಷೇಕದ ಪ್ರತಿಯೊಂದು ಘಟನೆಯನ್ನೂ ಬಹು ಸಂಕ್ಷಿಪ್ತವಾಗಿ ಅಷ್ಟೇ ಸುಮನೋಹರವಾಗಿ ಬಿತ್ತರಿಸಿದ ಶ್ರೇಯಸ್ಸು ಗುರು-ಶಿಷ್ಯೆಯರಿಬ್ಬರಿಗೂ ಸಲ್ಲಬೇಕು. ಇದು ಎಲ್ಲೂ ಯಾಂತ್ರಿಕವೆನಿಸಲಿಲ್ಲ..
ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ತಾಂತ್ರಿಕತೆಯನ್ನು ಸಮಯೋಚಿತವಾಗಿ ಬಳಸಿಕೊಂಡದ್ದು ನೃತ್ಯದ ಪರಿಣಾಮಕ್ಕೆ ಪೂರಕವಾಗಿತ್ತು.
ನೃತ್ಯಪ್ರಸ್ತುತಿಯ ಹೃದಯಭಾಗ-ಅಷ್ಟೇ ಹೃದ್ಯವೂ ಆದ ‘ ವರ್ಣ’-‘ಶ್ರೀಚಕ್ರ ರಾಜ ರಾಜೇಶ್ವರಿ…ಶಕ್ತಿತ್ರಯ ದೇವತೆಯೇ…’ ಎಂಬ ಕನ್ನಡ ವರ್ಣ ( ರಚನೆ-ಗುರುಮೂರ್ತಿ ಜಿ. ಗಾಯನ-ಬಾಲಸುಬ್ರಹ್ಮಣ್ಯ ಶರ್ಮ) ದೈವೀಕವಾಗಿ ಮನದುಂಬಿತು. ನಡುನಡುವೆ ಮಿಂಚಿದ ನೃತ್ತಗಾಮಿನಿಯಲ್ಲಿ ಅರೆಮಂಡಿಯ ವೈವಿಧ್ಯ, ಆಕಾಶಚಾರಿಗಳ ಮೋಹಕತೆ ಮಿಗಿಲೆನಿಸಿದವು.ಸಕಲಲೋಕ ಜನನಿಯಾದ ತ್ರಿಶಕ್ತಿಯ ರೂಪ-ಶಕ್ತಿಗಳ ವರ್ಣನೆ- ಮಹಿಮೆಯನ್ನು ನವದುರ್ಗೆಯರ ದರ್ಶನದಲ್ಲಿ ಕಟ್ಟಿಕೊಟ್ಟು ಮಹಿಷಾಸುರನ ವಧೆ, ರಕ್ತಬೀಜಾಸುರನನ್ನು ಸಂಹರಿಸಿದ ದೇವಿ ಶಾಂತಿಧರ್ಮವನ್ನು ಮರು ಸ್ಥಾಪಿಸಿ, ಕೀರ್ತಿವಂತಳಾದ ಚಾಮುಂಡೇಶ್ವರಿಯ ದಿವ್ಯ ಸೊಬಗಿನ ನೋಟವನ್ನು ಕಲಾವಿದೆ ಸೊಗಸಾದ ಅಭಿನಯದಿಂದ ಕಂಡರಿಸಿದಳು.
ಅನಂತರ ತನುಶ್ರೀ- ‘ನೀಲಕಂಠ ಮಹೇಶ್ವರ’ ( ರಚನೆ -ರೂಪಶ್ರೀ ಮಧುಸೂದನ್) ನಾದ ಅರ್ಧನಾರೀಶ್ವರನ ಲಾಸ್ಯ-ತಾಂಡವ ನೃತ್ಯವನ್ನು ನಿರೂಪಿಸುತ್ತ, ಲೋಕ ಕಲ್ಯಾಣಾರ್ಥವಾಗಿ ನಡೆದ ಮನ್ಮಥ ದಹನ, ಶಿವ ನೀಲಕಂಠನಾಗುವ ಘಟನೆ ಇತ್ಯಾದಿ ಪ್ರಕರಣಗಳನ್ನು ಅಳವಡಿಸಿದ ಸಂಚಾರಿಗಳನ್ನು ಕಲಾವಿದೆ ಭಕ್ತಿಭಾವದಿಂದ ತನ್ನ ನೃತ್ಯ-ಅಭಿನಯಗಳಲ್ಲಿ ತೋರಿಸುತ್ತಾ, ಢಮರುಗ ಹಿಡಿದು ಧೀರೋದಾತ್ತ ಹೆಜ್ಜೆಗಳಲ್ಲಿ ಝೇಂಕರಿಸಿ, ಚೈತನ್ಯಪೂರ್ಣವಾಗಿ ಸಪ್ತ ತಾಂಡವಗಳನ್ನು ಪ್ರದರ್ಶಿಸಿದಳು.
ಅನಂತರ- ಶ್ರೀಮನ್ಮಧ್ವಾಚಾರ್ಯ ವಿರಚಿತ ‘ ಶ್ರೀ ನಮೋ ವಾಸುದೇವಂ…’ ಕೃತಿಯಲ್ಲಿ ದೇವಕಿನಂದನನ ಸಮಸ್ತ ಬಾಲಲೀಲೆಗಳು, ಸಾಹಸ-ಮಹಿಮೆಗಳನ್ನು ಅರುಹುವ ಸಮಗ್ರ ಚಿತ್ರಣವನ್ನು ಕಲಾವಿದೆ ಎಳೆಎಳೆಯಾಗಿ ಅಭಿನಯದ ನೇಯ್ಗೆಯಲ್ಲಿ ನವಿರಾಗಿ ಅರ್ಪಿಸಿದಳು. ದಶಾವತಾರಗಳ ಸೊಗಸು ಸಂಕ್ಷಿಪ್ತವಾಗಿ ಮಿನುಗಿದರೆ, ವಿಶ್ವರೂಪ-ಗೀತೋಪದೇಶದ ದೃಶ್ಯಗಳು ಅನನ್ಯವಾಗಿದ್ದವು. ‘ಕಲ್ಕಿ’ಯ ಆಗಮನದ ಸೂಚ್ಯದೃಶ್ಯ- ‘ಆನಂದತೀರ್ಥ ಪರಾನಂದ ವರದ’- ಭಕ್ತಿ ತಾದಾಮ್ಯತೆಯ ಭಜನೆಯ ತಲ್ಲೀನತೆಯಲ್ಲಿ ನೋಡುಗರೂ ನಿಮಗ್ನರಾಗಿದ್ದರು.
ಗುರು ಹೇಮಾ ತಮ್ಮ ಎಲ್ಲ ಪ್ರಯೋಗಗಳಲ್ಲೂ ಹೊಸತನ ಮೂಡಿಸುವವರು. ಸಾಂಪ್ರದಾಯಿಕವಾಗಿ ಮುಗಿಯಬಹುದಾದ ‘ತಿಲ್ಲಾನ’ದಲ್ಲೂ ನವೀನತೆ ಮೆರೆದು ಪ್ರಕೃತಿದೇವಿಯ ಪ್ರಾಮುಖ್ಯ, ಋತುರಾಜನ ವೈಭವ, ವಸಂತೋತ್ಸವ, ಪಂಚಭೂತಗಳ ಅವಿನಾಭಾವ ಸಂಬಂಧವನ್ನು ಸಾರುವ ಸಾಹಿತ್ಯಕ್ಕೆ ತನುಶ್ರೀ ಹೆಜ್ಜೆ-ಗೆಜ್ಜೆಗಳನ್ನು ಮಿಡಿದು, ಮಂಗಳಾತ್ಮಕವಾಗಿ ತನ್ನ ನೃತ್ಯವನ್ನು ಸಂಪನ್ನಗೊಳಿಸಿದಳು.
ವೈ.ಕೆ.ಸಂಧ್ಯಾ ಶರ್ಮ

RELATED ARTICLES
- Advertisment -
Google search engine

Most Popular

Recent Comments