Thursday, November 30, 2023
Homeಇದೀಗ ಬಂದ ತಾಜಾ ಸುದ್ದಿಸುಸ್ಥಿರ ರಸಗೊಬ್ಬರ ನಿರ್ವಹಣೆಗಾಗಿ ಭಾರತದ ಹೊಸ ಉಪಕ್ರಮಗಳು: ನರೇಂದ್ರ ಸಿಂಗ್ ತೋಮರ್

ಸುಸ್ಥಿರ ರಸಗೊಬ್ಬರ ನಿರ್ವಹಣೆಗಾಗಿ ಭಾರತದ ಹೊಸ ಉಪಕ್ರಮಗಳು: ನರೇಂದ್ರ ಸಿಂಗ್ ತೋಮರ್

ಭಾರತವು ತನ್ನ 140 ಕೋಟಿ ಜನರಿಗೆ ತನ್ನ ರಾಷ್ಟ್ರೀಯ ಆಹಾರ ಭದ್ರತಾ ಗುರಿ ಸಾಧಿಸುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕಾದರೆ ಸುಸ್ಥಿರ ಕೃಷಿ ಅತ್ಯಗತ್ಯ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ, ರಾಸಾಯನಿಕಗಳು ಮತ್ತು ರಸಗೊಬ್ಬರ ಸಚಿವಾಲಯವು ಅಸಮತೋಲಿತ ರಾಸಾಯನಿಕ ಗೊಬ್ಬರ ಬಳಕೆಯ ಹೆಚ್ಚುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಪೂರ್ವಭಾವಿ ಉಪಕ್ರಮಗಳನ್ನು ತೆಗೆದುಕೊಂಡಿದೆ.
ಈ ಉಪಕ್ರಮಗಳು ನೀತಿ ಮಧ್ಯಸ್ಥಿಕೆ, ಹೂಡಿಕೆ, ಹಣಕಾಸು ಬೆಂಬಲ, ತಾಂತ್ರಿಕ ಹಸ್ತಕ್ಷೇಪ ಮತ್ತು ಮೌಲ್ಯವರ್ಧನೆಯ ವಿವಿಧ ಪ್ರಯತ್ನಗಳ ಸಂಯೋಗದ ಮೂಲಕ ಭಾರತೀಯ ಕೃಷಿಯನ್ನು ರಚನಾತ್ಮಕವಾಗಿ ಪರಿವರ್ತಿಸುವ ಗುರಿ ಹೊಂದಿವೆ. ಪರಿಸ್ಥಿತಿಯ ತುರ್ತು ಅಗತ್ಯವನ್ನು ಗುರುತಿಸಿ, 2023 ಜೂನ್ 28ರಂದು, ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಇಎ)ಯು, ಯೂರಿಯಾ ಸಬ್ಸಿಡಿ ಯೋಜನೆ ಮುಂದುವರಿಸಲು ಮತ್ತು ಸಾವಯವ ಗೊಬ್ಬರಗಳ ಅಳವಡಿಕೆ ಉತ್ತೇಜಿಸಲು ಒಟ್ಟು 370,128.7 ಕೋಟಿ ರೂ. ಮೌಲ್ಯದ ಉಪಕ್ರಮಗಳ ಸರಣಿಗೆ ಅನುಮೋದನೆ ನೀಡಿತು. ಇದು ಸುಸ್ಥಿರ ಕೃಷಿಗೆ ಸರ್ಕಾರ ಹೊಂದಿರುವ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. 141 ಶತಕೋಟಿ ಹೆಕ್ಟೇರ್ ಭೂಮಿ ಹೊಂದಿರುವ 120 ದಶಲಕ್ಷಕ್ಕೂ ಹೆಚ್ಚು ರೈತರ ಯೋಗಕ್ಷೇಮವನ್ನು ಪ್ರತಿಬಿಂಬಿಸುತ್ತದೆ. ಸರ್ಕಾರವು ಕೈಗೊಂಡ ಪ್ರಮುಖ ಉಪಕ್ರಮಗಳು ಕೆಳಕಂಡಂತಿವೆ:

ಯೂರಿಯಾ ಸಬ್ಸಿಡಿ ಯೋಜನೆ ವಿಸ್ತರಿಸುವುದು
ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಇಎ)ಯು 368,676.70 ಕೋಟಿ ರೂಪಾಯಿ ಹಂಚಿಕೆಯೊಂದಿಗೆ 2025 ಮಾರ್ಚ್ 31ರ ವರೆಗೆ ಯೂರಿಯಾ ಸಬ್ಸಿಡಿ ಯೋಜನೆಯನ್ನು ವಿಸ್ತರಿಸಿದೆ. ಈ ವಿಸ್ತರಣೆಯು 2022-23ರಿಂದ 2024-25ರ ವರೆಗಿನ ಆರ್ಥಿಕ ವರ್ಷಗಳನ್ನು ಒಳಗೊಂಡಿದೆ. ಮೋದಿ ಸರ್ಕಾರವು ಸ್ವದೇಶಿ ಉತ್ಪಾದನೆಯತ್ತ ಒಲವು ತೋರುವುದರೊಂದಿಗೆ, ದೇಶವು ತನ್ನ ಯೂರಿಯಾ ಉತ್ಪಾದನಾ ಸಾಮರ್ಥ್ಯವನ್ನು 2014-15ರಲ್ಲಿ 207.54 ಲಕ್ಷ ಮೆಟ್ರಿಕ್ ಟನ್‌ಗಳಿಂದ 2022-23 ರಲ್ಲಿ 283.74 ಎಲ್ಎಂಟಿಗೆ ಹೆಚ್ಚಿಸಿದೆ. ಯೂರಿಯಾ ಸಬ್ಸಿಡಿ ವಿಸ್ತರಣೆಯೊಂದಿಗೆ ಈ ಹೆಚ್ಚುವರಿ ಉತ್ಪಾದನೆಯು ರಾಷ್ಟ್ರಾದ್ಯಂತ ರೈತರಿಗೆ ಕೈಗೆಟುಕುವ ಯೂರಿಯಾ ಲಭ್ಯತೆಯನ್ನು ಖಚಿತಪಡಿಸುತ್ತಿದೆ.

ನ್ಯಾನೊ ಯೂರಿಯಾ ಪರಿಸರ ವ್ಯವಸ್ಥೆ ಬಲಪಡಿಸುವುದು
ಭಾರತವು ವಿಶ್ವದಲ್ಲೇ ಮೊದಲ ಬಾರಿಗೆ ನ್ಯಾನೊ ಯೂರಿಯಾ ದ್ರವವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದೆ. ಭಾರತೀಯ ರೈತರಿಗೆ ನವೀನ, ಪರಿಸರಸ್ನೇಹಿ ಮತ್ತು ಆರ್ಥಿಕ ಉತ್ಪನ್ನದೊಂದಿಗೆ ಸಬಲೀಕರಣಗೊಳಿಸಲು ವಾಣಿಜ್ಯ ಉದ್ದೇಶದಿಂದ  ಉತ್ಪಾದಿಸುತ್ತಿದೆ. 2023 ಮಾರ್ಚ್ ವರೆಗೆ, 76.5 ದಶಲಕ್ಷ ಬಾಟಲಿಗಳನ್ನು (33.6 LMT ಸಾಂಪ್ರದಾಯಿಕ ಯೂರಿಯಾಕ್ಕೆ ಸಮ) ಉತ್ಪಾದಿಸಲಾಗಿ, 54.2 ದಶಲಕ್ಷ ಬಾಟಲಿಗಳನ್ನು ಮಾರಾಟ ಮಾಡಲಾಗಿದೆ. 2025-26ರ ವೇಳೆಗೆ, 8 ನ್ಯಾನೊ ಯೂರಿಯಾ ಸ್ಥಾವರಗಳು 440 ದಶಲಕ್ಷ ಬಾಟಲಿಗಳ ಉತ್ಪಾದನಾ ಸಾಮರ್ಥ್ಯದೊಂದಿಗೆ 195 ಎಲ್ಎಂಟಿ ಸಾಂಪ್ರದಾಯಿಕ ಯೂರಿಯಾಕ್ಕೆ ಸಮನಾಗಿರುತ್ತದೆ. ಸಾಂಪ್ರದಾಯಿಕ ಡಿಎಪಿಗೆ ಪರಿಣಾಮಕಾರಿ ಮತ್ತು ಕಡಿಮೆ ವೆಚ್ಚಕ್ಕೆ ಪರ್ಯಾಯವಾಗಿ ನ್ಯಾನೋ ಡಿಎಪಿಯನ್ನು ರೈತರಿಗೆ ಪರಿಚಯಿಸಲಾಗಿದೆ.
ಆತ್ಮನಿರ್ಭರ್ ಭಾರತ್‌ ಆಶ್ರಯದಲ್ಲಿ, ಸರ್ಕಾರವು 6 ಯೂರಿಯಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ ಪುನಶ್ಚೇತನಗೊಳಿಸಿದೆ. ರಾಜಸ್ಥಾನದ ಕೋಟಾದಲ್ಲಿ ಚಂಬಲ್ ಫರ್ಟಿಲೈಸರ್ಸ್ ಲಿಮಿಟೆಡ್, ಪಶ್ಚಿಮ ಬಂಗಾಳದಲ್ಲಿ ಪನಾಗರ್ ಮ್ಯಾಟಿಕ್ಸ್ ಲಿಮಿಟೆಡ್, ತೆಲಂಗಾಣದ ರಾಮಗುಂಡಂನಲ್ಲಿ, ಉತ್ತರ ಪ್ರದೇಶದ ಗೋರಖ್‌ಪುರ, ಜಾರ್ಖಂಡ್ ನ  ಸಿಂಡ್ರಿ ಮತ್ತು ಬಿಹಾರದ ಬರೌನಿ. ಈ ಸ್ಥಳೀಯ ಉತ್ಪಾದನಾ ಘಟಕಗಳು ಮತ್ತು ನ್ಯಾನೊ ಯೂರಿಯಾ ಸ್ಥಾವರಗಳು ಯೂರಿಯಾದ ಮೇಲಿನ ಪ್ರಸ್ತುತ ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತಿವೆ. ಅಂತಿಮವಾಗಿ 2025-26ರ ವೇಳೆಗೆ ನಮ್ಮನ್ನು ಯೂರಿಯಾದಲ್ಲಿ ಆತ್ಮನಿರ್ಭರ್ (ಸ್ವಾವಲಂಬಿ) ಮಾಡುತ್ತದೆ.

ಗೋಬರ್ಧನ್ ಮೂಲಕ ಸಾವಯವ ಗೊಬ್ಬರ ಬೆಂಬಲಿಸುವುದು
ಮಾರುಕಟ್ಟೆ ಅಭಿವೃದ್ಧಿ ನೆರವು (MDA) ಘಟಕದ ಅಡಿ, ಅನನ್ಯ, ಬಹುಮುಖಿ, ತ್ಯಾಜ್ಯದಿಂದ ಸಂಪತ್ತು ಸೃಷ್ಟಿಸುವ ಗೋಬರ್ಧನ್ ಉಪಕ್ರಮಕ್ಕೆ ಸಂಬಂಧಿಸಿದ ಸಸ್ಯಗಳಲ್ಲಿ ಉತ್ಪಾದಿಸುವ ಸಾವಯವ ಗೊಬ್ಬರಗಳಿಗೆ ಪ್ರತಿ ಮೆಟ್ರಿಕ್ ಟನ್‌ಗೆ 1,500 ರೂ. ದರದಲ್ಲಿ ಸರ್ಕಾರ ಬೆಂಬಲ ನೀಡುತ್ತಿದೆ. ಈ ಸಮಗ್ರ ಮತ್ತು ಏಕೀಕೃತ ವಿಧಾನವು ವಿವಿಧ ಜೈವಿಕ ಅನಿಲ ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳು, ತ್ಯಾಜ್ಯ ನಿರ್ವಹಣೆ ಕಾರ್ಯಕ್ರಮಗಳು ಮತ್ತು ನೈರ್ಮಲ್ಯ ಉಪಕ್ರಮಗಳನ್ನು ಒಳಗೊಂಡಿದೆ.
ಆರ್ಥಿಕ ವರ್ಷ 2023-24ರಿಂದ 2025-26ರ ವರೆಗೆ ಒಟ್ಟು 1,451.84 ಕೋಟಿ ರೂ. ವೆಚ್ಚದೊಂದಿಗೆ, ಈ ನಿಧಿಯಲ್ಲಿ 360 ಕೋಟಿ ರೂ. ಸಂಶೋಧನಾ ಅಂತರ ನಿಧಿ ಒಳಗೊಂಡಿದೆ. ಇದು ಭಾರತದಲ್ಲಿ ಸಾವಯವ ಗೊಬ್ಬರಗಳ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕೃಷಿ ಒಳಹರಿವು (ಸಾವಯವ ಗೊಬ್ಬರ ಸೇರಿದಂತೆ) ಮತ್ತು ರೈತರಿಗೆ ಒಂದು-ನಿಲುಗಡೆ ಪರಿಹಾರವಾಗಿ ಸೇವೆಗಳನ್ನು ಒದಗಿಸಲು ಮತ್ತು ಅವರನ್ನು ಸಬಲೀಕರಣಗೊಳಿಸಲು, ಸುಮಾರು 100,000 ವಿಶಿಷ್ಟ ಮಾದರಿ ಕೃಷಿ ಉತ್ಪನ್ನಗಳು ಮತ್ತು ಸೇವಾ ಮಳಿಗೆಗಳು, ‘ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ರಾಷ್ಟ್ರವ್ಯಾಪಿ ಸ್ಥಾಪಿಸಲಾಗಿದೆ.

ಪಿಎಂ ಪ್ರಣಾಮ್ ಪರಿಚಯಿಸಲಾಗುತ್ತಿದೆ
ಪರಿಸರಸ್ನೇಹಿ ಮತ್ತು ಸುಸ್ಥಿರ ಕೃಷಿಯ ಉಪಕ್ರಮವಾಗಿ, ಸರ್ಕಾರವು ಮರುಸ್ಥಾಪನೆ, ಜಾಗೃತಿ ಮೂಡಿಸುವಿಕೆ, ಪೋಷಣೆ ಮತ್ತು ತಾಯಿ-ಭೂಮಿ ಸುಧಾರಣೆಗಾಗಿ ಪಿಎಂ ಪ್ರಣಾಮ್ ಕಾರ್ಯಕ್ರಮ ಪರಿಚಯಿಸಿತು. ಈ ಯೋಜನೆಯು ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಉತ್ತೇಜಿಸುತ್ತಿದೆ, ಪರ್ಯಾಯ ರಸಗೊಬ್ಬರಗಳನ್ನು ಉತ್ತೇಜಿಸುತ್ತದೆ ಮತ್ತು ರಾಸಾಯನಿಕ ಗೊಬ್ಬರಗಳ ಸಮತೋಲಿತ ಬಳಕೆಯನ್ನು ಉತ್ತೇಜಿಸುತ್ತಿದೆ. 2025-26ಕ್ಕೆ ನಿಗದಿಪಡಿಸಲಾದ ಪ್ರೋತ್ಸಾಹಧನವನ್ನು 2026-27ರಲ್ಲಿ ವಿತರಿಸಲಾಗುವುದು, ಇದು ಸುಸ್ಥಿರ ಕೃಷಿಗಾಗಿ ಸರ್ಕಾರದ ದೀರ್ಘಾವಧಿಯ ದೃಷ್ಟಿಕೋನವನ್ನು ಎತ್ತಿ ತೋರಿಸುತ್ತದೆ.

ನವೀನ ಅಥವಾ ಹೊಸತನದ ಯೂರಿಯಾ ಚಿನ್ನ
ಸಲ್ಫರ್ ಲೇಪನವನ್ನು ಒಳಗೊಂಡಿರುವ “ಯೂರಿಯಾ ಗೋಲ್ಡ್” ಎಂಬ ಹೊಸ-ಯುಗದ ಮೌಲ್ಯವರ್ಧಿತ ಯೂರಿಯಾವನ್ನು ಅನುಮೋದಿಸಿ, ಪರಿಚಯಿಸಲಾಗಿದೆ. ಈ ನವೀನ ಲೇಪನವು ಪ್ರಮುಖ ದ್ವಿತೀಯಕ ಸಸ್ಯ ಪೋಷಕಾಂಶವಾದ ಗಂಧಕವನ್ನು ಬೆಳೆಗಳಿಗೆ ಲಭ್ಯವಾಗುವಂತೆ ಮಾಡುತ್ತದೆ. “ಯೂರಿಯಾ ಗೋಲ್ಡ್” ಯೂರಿಯಾ ಬಳಕೆಯನ್ನು ಕಡಿಮೆ ಮಾಡುತ್ತದೆ, ಸುಧಾರಿತ ಸಾರಜನಕ ಬಳಕೆಯ ದಕ್ಷತೆಯನ್ನು ಖಾತ್ರಿಪಡಿಸುವ ಮೂಲಕ ಬೆಳೆ ಉತ್ಪಾದಕತೆ ಹೆಚ್ಚಿಸುತ್ತದೆ. ಈ ಸಮರ್ಥನೀಯ ರಸಗೊಬ್ಬರ ಆಯ್ಕೆಯು ಪೋಷಕಾಂಶಗಳ ನಿರ್ವಹಣೆ ಸುಧಾರಿಸಲು ಮತ್ತು ಯೂರಿಯಾ ಉತ್ಪಾದನಾ ಪ್ರಕ್ರಿಯೆಗಳನ್ನು ಉತ್ತಮಗೊಳಿಸುವ ಸರ್ಕಾರದ ಪ್ರಯತ್ನಗಳಿಗೆ ಹೊಂದಿಕೆಯಾಗುತ್ತದೆ.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಇತ್ತೀಚಿನ ಅನುಮೋದನೆಗಳು ಸುಸ್ಥಿರ ಕೃಷಿ ಮತ್ತು ರೈತರ ಯೋಗಕ್ಷೇಮಕ್ಕೆ ಭಾರತ ಸರ್ಕಾರದ ಅಚಲ ಬದ್ಧತೆಯನ್ನು ಪ್ರದರ್ಶಿಸುತ್ತವೆ. ಯೂರಿಯಾ ಸಬ್ಸಿಡಿ ಯೋಜನೆಯ ವಿಸ್ತರಣೆ, ಪಿಎಂ ಪ್ರಣಾಮ್ ಪರಿಚಯ, ಗೋಬರ್ಧನ್ ಮೂಲಕ ಸಾವಯವ ಗೊಬ್ಬರಗಳಿಗೆ ಬೆಂಬಲ ಮತ್ತು ನವೀನ ಯೂರಿಯಾ ಗೋಲ್ಡ್ ಇವೆಲ್ಲವೂ ಹೆಚ್ಚು ಪರಿಸರಸ್ನೇಹಿ ಮತ್ತು ಪರಿಣಾಮಕಾರಿ ಕೃಷಿ ಕ್ಷೇತ್ರವನ್ನು ನಿರ್ಮಿಸಲು ಕೊಡುಗೆ ನೀಡುತ್ತವೆ. ಈ ಉಪಕ್ರಮಗಳ ಜತೆಗೆ, ರಾಸಾಯನಿಕ ಗೊಬ್ಬರಗಳ ಸಮತೋಲಿತ ಬಳಕೆ ಉತ್ತೇಜಿಸಲು ಮತ್ತು ಸಾವಯವ, ಜೈವಿಕ ಮತ್ತು ನ್ಯಾನೋ ಗೊಬ್ಬರಗಳಂತಹ ಪರ್ಯಾಯ ರಸಗೊಬ್ಬರಗಳನ್ನು ಅಳವಡಿಸಿಕೊಳ್ಳಲು ಸರ್ಕಾರವು ಸಾಮೂಹಿಕ ಜಾಗೃತಿ ಅಭಿಯಾನಗಳನ್ನು ಸಹ ಪ್ರಾರಂಭಿಸಿದೆ. ಈ ಪ್ರಯತ್ನಗಳು ಮಣ್ಣನ್ನು ಸುಧಾರಿಸುವ ಮತ್ತು ತಾಯಿ ಭೂಮಿಯನ್ನು ಪೋಷಿಸುವ ಗುರಿ ಹೊಂದಿವೆ.
ಮೋದಿ ಸರ್ಕಾರವು ರಾಷ್ಟ್ರಕ್ಕೆ ಸಮರ್ಪಿತ ಸೇವೆಯ 9 ವರ್ಷಗಳನ್ನು ಗುರುತಿಸುತ್ತಿರುವಾಗ, ಕೃಷಿ ಕ್ಷೇತ್ರವನ್ನು ಸಶಕ್ತಗೊಳಿಸಲು ಮತ್ತು ಉನ್ನತಿಗೆ ತರಲು ಜಾರಿಗೆ ತಂದಿರುವ ಕಲ್ಯಾಣ ಯೋಜನೆಗಳ ಬಹುಸಂಖ್ಯೆಯನ್ನು ಅಂಗೀಕರಿಸುವುದು ಬಹಳ ಮುಖ್ಯ. ಸರ್ಕಾರವು “ಸಬ್ಕಾ ಸಾತ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್” ತತ್ವದಿಂದ ಮಾರ್ಗದರ್ಶಿಸಲ್ಪಟ್ಟ ನವ ಭಾರತವನ್ನು ರೂಪಿಸುತ್ತಿದೆ, ರೈತರ ಕಲ್ಯಾಣವು ಈ ದೃಷ್ಟಿಕೋನದ ಅವಿಭಾಜ್ಯ ಅಂಶವಾಗಿದೆ. ಈ ಯೋಜನೆಗಳು ರೈತರ ಜೀವನೋಪಾಯ ಹೆಚ್ಚಿಸಲು, ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಮತ್ತು ಕೃಷಿ ವಲಯದಲ್ಲಿ ಒಟ್ಟಾರೆ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿ ಹೊಂದಿವೆ. ರಾಷ್ಟ್ರದ ಪ್ರಗತಿಯಲ್ಲಿ ರೈತರು ಪ್ರಮುಖ ಪಾತ್ರ ವಹಿಸುವ ಸಮೃದ್ಧ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಭಾರತವನ್ನು ನಿರ್ಮಿಸುವ ಸರ್ಕಾರದ ಬದ್ಧತೆಯನ್ನು ಇದು ಒತ್ತಿ ಹೇಳುತ್ತದೆ.

ಲೇಖಕರು ಕೇಂದ್ರ ಕೃಷಿ ಸಚಿವರು. ಅವರ ಅಭಿಪ್ರಾಯಗಳು ವೈಯಕ್ತಿಕ

RELATED ARTICLES
- Advertisment -
Google search engine

Most Popular

Recent Comments