ಬೆಂಗಳೂರಿನ ‘ರಚನಾ ಡಾನ್ಸ್ ಅಕಾಡೆಮಿ’ ತನ್ನದೇ ಆದ ವೈಶಿಷ್ಟ್ಯಗಳಿಂದ ನೃತ್ಯಕ್ಷೇತ್ರದಲ್ಲಿ ಗಮನಾರ್ಹ ಸ್ಥಾನ ಪಡೆದಿದೆ. ಈ ನೃತ್ಯಸಂಸ್ಥೆಯನ್ನು ಸ್ಥಾಪಿಸಿದ ವಿದುಷಿ. ಕಾವ್ಯ ದಿಲೀಪ್ ಸ್ವತಃ ಉತ್ತಮ ನೃತ್ಯಕಲಾವಿದೆ ಹಾಗೂ ನಿಷ್ಠೆಯಿಂದ ತಾನು ಕಲಿತ ವಿದ್ಯೆಯನ್ನು ನೃತ್ಯಾಕಾಂಕ್ಷಿಗಳಿಗೆ ಸಂಪೂರ್ಣವಾಗಿ ಧಾರೆ ಎರೆಯುವ ಬದ್ಧತೆಯುಳ್ಳ ನೃತ್ಯಗುರು. ಪ್ರತಿವರ್ಷ ತಪ್ಪದೆ ನಡೆಸುವ ಸಂಸ್ಥೆಯ ‘ನೂಪುರ ನಿರಂತರ’ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ವಿಭಿನ್ನತೆಯಿಂದ ಕೂಡಿದ ಹೊಸ ಪ್ರಯೋಗಗಳಲ್ಲಿ ತೊಡಗಿಕೊಂಡು, ಉದಯೋನ್ಮುಖ ಕಲಾವಿದರಿಗೆ ವೇದಿಕೆ ಒದಗಿಸಿ ಪ್ರೋತ್ಸಾಹ ನೀಡುವುದು ‘ರಚನಾ ಡಾನ್ಸ್ ಅಕಾಡೆಮಿ’ಯ ಸತ್ಸಂಪ್ರದಾಯ.
ಸುಮಾರು ಮೂರುವರ್ಷದ ಮಗುವಿನಿಂದ ಹಿಡಿದು, ಐವತ್ತು ದಾಟಿದ ಗೃಹಿಣಿಯರವರೆಗೂ ಗುರು ಕಾವ್ಯ ಸಮಾನ ಆಸಕ್ತಿಯಿಂದ ನೃತ್ಯ ಶಿಕ್ಷಣವನ್ನು ಅಕ್ಕರೆಯಿಂದ ನೀಡುವುದು ಈಕೆಯ ವಿಶೇಷ. ಅದರಂತೆ ನಿನ್ನೆ’ ಸೇವಾಸದನ’ದ ರಂಗಮಂದಿರದಲ್ಲಿ ನಡೆದ ‘ನೂಪುರ ನಿರಂತರ-4’ ವೈವಿಧ್ಯಪೂರ್ಣ ನೃತ್ಯಾರ್ಪಣೆ ಪ್ರಸ್ತುತಿ ನೆರೆದ ಕಲಾರಸಿಕರನ್ನು ರಂಜಿಸಿತು. ತುಂಬಿದ ಸಭಾಗೃಹದ ಪ್ರೇಕ್ಷಕರು ಮಕ್ಕಳ ವರ್ಣರಂಜಿತ ನೃತ್ಯಾವಳಿಗಳನ್ನು ವೀಕ್ಷಿಸಿ ಸಂತಸದಿಂದ ಗಡಚಿಕ್ಕುವಂತೆ ಕರತಾಡನ ಮಾಡಿದರು.
ಸುಮಾರು ನಲವತ್ತೆರಡು ಮಕ್ಕಳು, ಕಣ್ತಣಿಸುವ ಆಹಾರ್ಯ- ಆಭರಣಗಳಿಂದ ಸಿಂಗರಗೊಂಡು, ಉದ್ದನೆಯ ಹೆರಳು , ಕುಚ್ಚು, ಬೈತಲೆ ಬೊಟ್ಟು- ಸೂರ್ಯ-ಚಂದ್ರರಿಂದ ಪ್ರಭೆಗೊಂಡು ಕಿಂಕಿಣಿಯೊಂದಿಗೆ ವೇದಿಕೆಯ ಮೇಲೆ ಪರಮೋತ್ಸಾಹದಿಂದ ಇಡೀ ‘ಮಾರ್ಗಂ’ ಸಂಪ್ರದಾಯದ ಸಾಲು ಸಾಲು ಕೃತಿಗಳನ್ನು ಬಹು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದರು. ಪುಷ್ಪಾಂಜಲಿಯಿಂದ ಪ್ರಾರಂಭವಾಗಿ, ವರ್ಣದ ಸಂಕೀರ್ಣ ದೀರ್ಘಬಂಧದ ಕೃತಿ, ಅಂತ್ಯದ ತಿಲ್ಲಾನದೊಂದಿಗೆ ಸಂಪನ್ನವಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಲೇಖಕಿ-ಕಲಾ ವಿಮರ್ಶಕಿ ವೈ.ಕೆ.ಸಂಧ್ಯಾ ಶರ್ಮ, ‘ನಿದಂ’ ಸಂಸ್ಥೆಯ ನೃತ್ಯ ವಿದುಷಿ ಪೂರ್ಣಿಮಾ ರಜಿನಿ ಮತ್ತು ಪರಿಸರವಾದಿ ಮತ್ತು ವೀಣಾವಾದಕಿ ರೇವತಿ ಕಾಮತ್ ಉಪಸ್ಥಿತರಿದ್ದರು. ವಿದುಷಿ ಕಾವ್ಯ ದಿಲೀಪ್ ಮತ್ತು ದಿಲೀಪ್ ಹಾಜರಿದ್ದರು. ತೇಜು ಅವರ ಲವಲವಿಕೆಯ ನಿರೂಪಣೆ ಮಾಡಿದರು.
ಕೊನೆಯಲ್ಲಿ ಭಾಗವಹಿಸಿದ ಮಕ್ಕಳಿಗೆಲ್ಲ ಸ್ಮರಣಿಕೆ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
********** ವೈ.ಕೆ.ಸಂಧ್ಯಾ ಶರ್ಮ