ಬಿಳಿ ಮಾರ್ಬಲ್ಲಿನ ಮೇಲೆ ಕೋಡಿರುವ
ತಾಜ್ ಮಹಲ್ ಜಗದಚ್ಚರಿಯೇ?
ಜನರ ತೆರಿಗೆ ಹಣದಲ್ಲಿ ಸತ್ತವಳಿಗೆ
ಸಮಾಧಿ ಕಟ್ಟಿದ್ದು ಹೆಚ್ಚುಗಾರಿಕೆಯೇ?
ಓ ಹೆಣ್ಣೆ! ಸೂರ್ಯನೇ ನಾಚುವ
ಚಂದ್ರನೇ ಅಂಗಲಾಚುವ
ನಿನ್ನಂದ ಚಂದ ಅಚ್ಚರಿಯಲ್ಲವೇ?
ಯಾರು ಭೇದಿಸದ ಛೇದಿಸದ
ಚೀನಾ ಗೋಡೆ ಜಗದಚ್ಚರಿಯೇ?
ಗೋಡೆಯೊಳಗೆ ಸುರಕ್ಷಿತವಾಗಿ ಕುಳಿತು
ಸಾಮ್ರಾಜ್ಯವಾಳಿದ್ದು ಹೆಚ್ಚುಗಾರಿಕೆಯೇ?
ಓ ಹೆಣ್ಣೆ! ಕೋಟೆಯೇ ಇಲ್ಲದ ನಿನ್ನನಾಳಲು
ಸಾಮ್ರಾಜ್ಯಗಳು ಬೆಳಗಿದ್ದು
ಮುಳುಗಿದ್ದು ಅಚ್ಚರಿಯಲ್ಲವೇ?
ಅತ್ತೂ ಕರೆದು ಅಚ್ಚರಿಗಳ ಸಾಲಿಗೆ ಸೇರಿದ
ಗೀಝಾದ ಪಿರಮಿಡ್ ಜಗದಚ್ಚರಿಯೇ?
ಸತ್ತವರಿಗೆ ಗೋಡೆ ಕಟ್ಟಿ ಇಷ್ಟದ ವಸ್ತುವಿಟ್ಟು
ಮಮ್ಮಿ ಮಾಡಿದ್ದು ಹೆಚ್ಚುಗಾರಿಕೆಯೇ?
ಓ ಹೆಣ್ಣೆ! ಪ್ರಕೃತಿಯೇ ನೀನಾಗಿ ಪುರುಷನ ಜೊತೆಯಾಗಿ
ಸೃಷ್ಟಿಗೆ ಕಾರಣವಾಗಿ ಜೀವಂತ
ಮಮ್ಮಿಯೆನಿಸಿದ್ದು ಅಚ್ಚರಿಯಲ್ಲವೇ?
ಇಂಕಾ ಸಾಮ್ರಾಜ್ಯದ ಕೊನೆಯ ನಗರ
ಪೆರುವಿನ ಮೆಚೂ ಪಿಚೂ ಜಗದಚ್ಚರಿಯೇ?
ಹದಿನೈದನೇ ಶತಮಾನದ ಕಣಿವೆಯ
ನಾಗರಿಕತೆ ಹೆಚ್ಚುಗಾರಿಕೆಯೇ?
ಓ ಹೆಣ್ಣೆ! ನೀನೆತ್ತ ಮಕ್ಕಳೇ ಮನುಕುಲದ
ಮೂಲವಾಗಿ ನಾಗರಿಕತೆಗೆ
ಕಾರಣವಾಗಿದ್ದು ಅಚ್ಚರಿಯಲ್ಲವೇ?
ಕಾಂಕ್ರೀಟ್ ಸೋಪ್‌ಸ್ಟೋನಿಂದ ನಿರ್ಮಿತ
ಬ್ರೆಜಿಲ್‌ನ ಕ್ರೈಸ್ಟ್ ದಿ ರಿಡೀಮರ್ ಜಗದಚ್ಚರಿಯೇ?
ಕೇವಲ ಎರಡು ಸಾವಿರ ವರ್ಷಗಳ
ಕ್ರಿಸ್ತನ ನೆನಪಿನ ಪ್ರತಿಮೆ ಹೆಚ್ಚುಗಾರಿಕೆಯೇ?
ಓ ಹೆಣ್ಣೆ! ಆದಿ ಅಂತ್ಯಗಳೇ ಅರಿಯದ
ಸಾವಿರಾರು ಪ್ರತಿಮೆಗಳ ಸಂಕೇತವಾದ
ನೀನೇ ಬಹು ದೊಡ್ಡ ಅಚ್ಚರಿಯಲ್ಲವೇ?
ನಬಾಟಿಯನ್ನರ ಸಂಪತ್ತಿನ ಕೇಂದ್ರ
ಜೋರ್ಡಾನಿನ ಪೆಟ್ರಾ ಜಗದಚ್ಚರಿಯೇ?
ರೋಮನ್ನರ ವಶವಾಗಿ ಅವನತಿಗೆ ಈಡಾಗಿ
ಅಸ್ತಿತ್ವ ಅಳಿದದ್ದು ಹೆಚ್ಚುಗಾರಿಕೆಯೇ?
ಓ ಹೆಣ್ಣೆ! ಶತಮಾನ ಶತಮಾನಗಳಿಂದ
ಕ್ರೌರ್ಯ ಹಿಂಸೆಗಳ ದಳ್ಳುರಿಗೆ ಸಿಲುಕಿಯೂ
ತಲೆ ಎತ್ತಿ ನಿಂತದ್ದು ಅಚ್ಚರಿಯಲ್ಲವೇ?
ಇತಿಹಾಸದ ಸಾಮ್ರಾಜ್ಯಶಾಹಿ ಶಕ್ತಿ ರೋಮ್ ನ
ಬಯಲು ಕುಸ್ತಿ ಪ್ರಾಂಗಣ ಜಗದಚ್ಚರಿಯೇ?
ಉತ್ಕೃಷ್ಟ ಬೌದ್ಧಿಕ ಸಂಕೇತವಾಗಿಯೂ
ಇಂದು ಅಸ್ತಿತ್ವವಿಲ್ಲದಿರುವುದು ಹೆಚ್ಚುಗಾರಿಕೆಯೇ?
ಓ ಹೆಣ್ಣೆ! ಜಗದಂಗಳವೆಲ್ಲ ನಿನಗಾಗಿ ನಡೆದ
ಬಗೆಬಗೆಯ ಹಲಬಗೆಯ ಕುಸ್ತಿಗಳಿಗೆ
ಲೆಕ್ಕವಿಲ್ಲದಿರುವುದು ಅಚ್ಚರಿಯಲ್ಲವೇ?
ನಾಲ್ಕು ಡಿಗ್ರಿ ಪಕ್ಕಕ್ಕೆ ವಾಲಿರುವ
ಪೀಸಾ ಗೋಪುರ ಜಗದಚ್ಚರಿಯೇ?
ಇಷ್ಟು ಬಾಗಿಸಲು ಅಷ್ಟೊಂದು
ಕಷ್ಟಪಟ್ಟಿದ್ದು ಹೆಚ್ಚುಗಾರಿಕೆಯೇ?
ಓ ಹೆಣ್ಣೆ! ಮುನ್ನೂರರವತ್ತು ಡಿಗ್ರಿ ಬಳುಕುವ
ಎತ್ತಂದರತ್ತ ವಾಲುವ ತೇಲುವ
ನಿನ್ನಯ ಅಂಗಾಂಗಗಳು ಅಚ್ಚರಿಯಲ್ಲವೇ?
ಮಾಯಾ ನಾಗರಿಕತೆಯ ಕುರುಹಾದ
ಮೆಕ್ಸಿಕೊದ ಚಿಚಿನ್ ಇಟ್ಜಾ ಜಗದಚ್ಚರಿಯೇ?
ಮಾನವ ಜೀವಿಗಳನ್ನು ಬಲಿಕೊಟ್ಟು
ಜಲ ಮಾಂತ್ರಿಕರಾಗಿದ್ದು ಹೆಚ್ಚುಗಾರಿಕೆಯೇ?
ಓ ಹೆಣ್ಣೆ! ನೆಲ ಜಲ ಬಲ ಕುಲ ಹೊಲ ಫಲ
ಎಲ್ಲವನ್ನು ಹಿಡಿದಿಟ್ಟುಕೊಳ್ಳುವ
ನಿನ್ನ ಮಾಂತ್ರಿಕ ಶಕ್ತಿ ಅಚ್ಚರಿಯಲ್ಲವೇ?
ಓ ಹೆಣ್ಣೆ! ನಿನಗಿಂತ ಜಗದಚ್ಚರಿ ಎಲ್ಲುಂಟೆ?
ನಿನಗಿಂತ ಹೆಚ್ಚುಗಾರಿಕೆ ಇರಲುಂಟೆ?
ನಿನಗಿಂತ ಅಚ್ಚರಿಯಾದದ್ದು ಇನ್ನುಂಟೆ?
ಕಾರ್ಯೇಶು ದಾಸಿ ಕರುಣೇಶು ಮಂತ್ರಿ
ಭೋಜೇಶು ಮಾತಾ ಶಯನೇಶು ರಂಭ
ಕ್ಷಯನೇಶು ಧರಿತ್ರಿ ರೂಪೇಶು ಲಕ್ಷ್ಮೀ
ಸತ್ಕರ್ಮಯುಕ್ತ ಕುಲಧರ್ಮಪತ್ನಿ
ಜಗದಚ್ಚರಿ ಸ್ತ್ರೀಯೇ ನಿನಗಿದೋ ನಮನ
—ಮಣ್ಣೆ ಮೋಹನ್